ADVERTISEMENT

ಎಚ್‌–1ಬಿ ವೀಸಾ ವಲಸಿಗರಿಗೆ ಟ್ರಂಪ್‌ ಸರ್ಕಾರ ಎಚ್ಚರಿಕೆ

ಪಿಟಿಐ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಎಚ್‌–1ಬಿ ವೀಸಾಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುವುದು ಎಂದು ಅರ್ಜಿದಾರರಿಗೆ ಅಮೆರಿಕ ಎಚ್ಚರಿಸಿದೆ.

2019ರ ಅಕ್ಟೋಬರ್‌ 1ರಿಂದ ಆರಂಭವಾಗುವ ಆರ್ಥಿಕ ವರ್ಷಕ್ಕೆ ವೀಸಾ ನೀಡಿಕೆ ಪ್ರಕ್ರಿಯೆಯು ಏಪ್ರಿಲ್‌ 2ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ಇಂಥದ್ದೊಂದು ಎಚ್ಚರಿಕೆ ನೀಡಲಾಗಿದೆ.

‘ವೀಸಾ ಕೋರಿ ಬಂದಿರುವ ಎಲ್ಲಾ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗುವುದು. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದರೆ, ಅವರಿಗೆ ಅದರ ಅಗತ್ಯ ಎಷ್ಟು ಇದೆ ಎಂಬುದನ್ನು ಪರಿಶೀಲಿಸಲಾಗುವುದು. ಇಲ್ಲಿ ವ್ಯವಹಾರ ನಡೆಸಲು ವೀಸಾ ಅಗತ್ಯವಿದ್ದಲ್ಲಿ ಮಾತ್ರ ಅದನ್ನು ಪರಿಗಣಿಸಲಾಗುವುದು’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವಾ ವಿಭಾಗವು ಹೇಳಿದೆ.

ADVERTISEMENT

ಅಮೆರಿಕದ ನುರಿತ ವೃತ್ತಿಪರರು ಯಾವ ಕ್ಷೇತ್ರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆಯೋ, ಅಂಥ ಕಡೆಗಳಲ್ಲಿ ಕಂಪನಿಗಳು ವಿದೇಶಿ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಎಚ್‌ 1ಬಿ ಕಾರ್ಯಕ್ರಮದಡಿ ತಾತ್ಕಾಲಿಕ ವೀಸಾ ನೀಡಲಾಗುತ್ತಿದೆ.

ಸಂಗಾತಿಗೂ ಉದ್ಯೋಗಾವಕಾಶ ಸೌಲಭ್ಯ ರದ್ದತಿಗೆ ಚಿಂತನೆ
ಎಚ್‌ 1ಬಿ ವೀಸಾ ಹೊಂದಿ ಅಮೆರಿಕದಲ್ಲಿ ನೌಕರಿಯಲ್ಲಿರುವವರ ಗಂಡ ಅಥವಾ ಹೆಂಡತಿಗೂ ಉದ್ಯೋಗದ ಅವಕಾಶ ಕಲ್ಪಿಸುವ ಸೌಲಭ್ಯವನ್ನು ತೆಗೆದುಹಾಕಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ನಿರ್ಧರಿಸಿದೆ.

ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವಧಿಯಿಂದ ಇದ್ದ ಈ ಸೌಲಭ್ಯವನ್ನು ಹೆಚ್ಚಿಗೆ ಪಡೆಯುತ್ತಿರುವವರು ಭಾರತೀಯರು. ಈ ಹೊಸ ನಿಯಮದಿಂದಾಗಿ ವಿದೇಶಿ ಪ್ರತಿಭೆಗಳಿಗೆ ಅಮೆರಿಕ ಇನ್ನುಮುಂದೆ ಹೆಚ್ಚು ಆಕರ್ಷಕವಾಗಿ ಕಾಣಿಸುವ ಸಾಧ್ಯತೆ ಕಡಿಮೆಯಾಗಿದೆ.

‘ಇದರಿಂದ ಅಮೆರಿಕಕ್ಕೂ ಹೊಡೆತ ಬೀಳಲಿದೆ’ ಎಂದಿವೆ ಮಾಧ್ಯಮಗಳು. ‘ಗಂಡ ಅಥವಾ ಹೆಂಡತಿ ಕೆಲಸದಲ್ಲಿ ಇದ್ದಾಗ ಅವರ ಸಂಗಾತಿಗಳೂ ಇಲ್ಲಿ ಕೆಲಸಕ್ಕೆ ಸೇರಿ, ಸರ್ಕಾರಕ್ಕೆ ಕೊಡುಗೆ ನೀಡುತ್ತಿದ್ದರು. ಆದರೆ ಈ ಹೊಸ ನಿಯಮ ಜಾರಿಗೆ ಬಂದಲ್ಲಿ ಇದು ಕಡಿಮೆಯಾಗಲಿದೆ’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.