ADVERTISEMENT

ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ: ತಪ್ಪಿದ ಭಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಕರಾಚಿ/ ಲಾಹೋರ್: ಪಾಕಿಸ್ತಾನದಲ್ಲಿ ಭಾನುವಾರ ಎರಡು ಪ್ರಯಾಣಿಕ ವಿಮಾನಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಆತಂಕದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಅಂತಿಮವಾಗಿ ಎರಡೂ ವಿಮಾನಗಳು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾದವು.

ಭೋಜಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಪ್ರತಿಕೂಲ ಹವಾಮಾನವಿದ್ದಾಗ ರಾವಲ್ಪಿಂಡಿ ಬಳಿ ಅಪಘಾತಕ್ಕೀಡಾಗಿ 127 ಜನ ಸಾವಿಗೀಡಾದ ಎರಡನೇ ದಿನವೇ ಈ ಘಟನೆಗಳು ನಡೆದಿವೆ.

ಲಾಹೋರ್‌ನಿಂದ ಹೊರಟಿದ್ದ ಶಾಹೀನ್ ಏರ್‌ಕ್ರಾಫ್ಟ್‌ಗೆ ಸೇರಿದ ವಿಮಾನ ಇನ್ನೇನು ರನ್‌ವೇ ಬಿಟ್ಟು ಮೇಲಕ್ಕೆ ಹಾರುವ ಹಂತದಲ್ಲಿದ್ದಾಗ, ಅದರ ಇಂಧನ ಟ್ಯಾಂಕಿನಲ್ಲಿ ಸೋರಿಕೆ ಕಂಡುಬಂತು. ಪೈಲಟ್ ತಕ್ಷಣವೇ ಬ್ರೇಕ್ ಹಾಕಿ ವಿಮಾನ ನಿಲ್ಲಿಸಿದರು.

ಈ ವಿಮಾನದಲ್ಲಿ 200 ಪ್ರಯಾಣಿಕರು ಇದ್ದರು. ಇದಕ್ಕೆ ಮುನ್ನ, ಇದೇ ಕಂಪನಿಗೆ ಸೇರಿದ ಬೇರೊಂದು ವಿಮಾನ ಕರಾಚಿ ವಿಮಾನದಲ್ಲಿ ಇಳಿಯುತ್ತಿದ್ದಾಗ ಟೈರುಗಳು ಸ್ಫೋಟಗೊಂಡವು. ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ವಿಮಾನದಲ್ಲಿ 100 ಪ್ರಯಾಣಿಕರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.