ADVERTISEMENT

ಏ. 6ರಂದು ಇಟಲಿ ಪ್ರಧಾನಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 16:45 IST
Last Updated 15 ಫೆಬ್ರುವರಿ 2011, 16:45 IST

ರೋಮ್ (ಎಎಫ್‌ಪಿ): ಅಪ್ರಾಪ್ರ ವಯಸ್ಸಿನ ಬಾಲಕಿಯರೊಂದಿಗೆ ವ್ಯಭಿಚಾರ ನಡೆಸಿದ, ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪಗಳ ಮೇಲೆ ಇಟಲಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೋನಿ ಅವರನ್ನು ಏಪ್ರಿಲ್‌ನಲ್ಲಿ ವಿಚಾರಣೆಗೆ ಒಳಪಡಿಸಲು ಮಿಲಾನ್ ಕೋರ್ಟ್ ಮಂಗಳವಾರ ಆದೇಶಿಸಿದೆ.

ಏಪ್ರಿಲ್ 6ರಂದು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ನ್ಯಾಯಾಧೀಶರಾದ ಕ್ರಿಸ್ಟಿನಾ ಡಿ ಸೆನ್ಸಾ ದಿನಾಂಕವನ್ನು ಗೊತ್ತುಪಡಿಸಿದ್ದಾರೆ.

‘ಮೂವರು ಮಹಿಳಾ ನ್ಯಾಯಾಧೀಶರು ಪ್ರಧಾನಿ ಅವರ ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ ನಾವು ಏನನ್ನೂ ನಿರೀಕ್ಷೆ ಮಾಡಿಲ್ಲ’ ಎಂದು ಬರ್ಲುಸ್ಕೋನಿ ಅವರ ವಕೀಲರು ತಿಳಿಸಿದ್ದಾರೆ.

74 ವರ್ಷದ ಬರ್ಲುಸ್ಕೋನಿ ಅವರು ನೈಟ್‌ಕ್ಲಬ್ ಡ್ಯಾನ್ಸರ್, 17 ವರ್ಷದ ಯುವತಿಯೊಂದಿಗೆ ಲೈಂಗಿಕಕ್ರಿಯೆ ನಡೆಸಿ ಆಕೆಗೆ ಹಣ ನೀಡಿದ ಆರೋಪ ಎದುರಿಸುತ್ತಿದ್ದು, ಈ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕೆಂಬ ಮಿಲಾನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ಗಳ ಕೋರಿಕೆಯನ್ನು ಸೆನ್ಸಾ ಪುರಸ್ಕರಿಸಿದ್ದಾರೆ. ಪ್ರಧಾನಿ ಸ್ಥಾನದಲ್ಲಿದ್ದುಕೊಂಡು ಮನಬಂದಂತೆ ಅಧಿಕಾರ ಚಲಾಯಿಸಿರುವುದು ಹಾಗೂ ಕಳೆದ ವರ್ಷ ಮೇನಲ್ಲಿ ಕಳ್ಳತನದ ಆರೋಪದ ಮೇರೆಗೆ ಬಂಧಿಸಲಾಗಿದ್ದ ಮೊರಾಕ್ಕೊ ದೇಶದ ಯುವತಿಯೊಬ್ಬಳನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದರು ಎಂಬ ಆರೋಪ ಬರ್ಲುಸ್ಕೋನಿ ಅವರ ಮೇಲಿದೆ.

ಇಟಲಿಯಲ್ಲಿ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. ಆದರೆ, 18 ವರ್ಷದೊಳಗಿನವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಹಣ ನೀಡುವುದು ಕಾನೂನುಬಾಹಿರ ಕೃತ್ಯ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಬರ್ಲುಸ್ಕೋನಿ, 2010ರ ನವೆಂಬರ್‌ನಲ್ಲಿ 18 ವರ್ಷ ಮೀರಿರದ ಯುವತಿಯೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಗೆ ಹಣ ನೀಡಿಲ್ಲ ಎಂದು ತಿಳಿಸಿದ್ದಾರೆ. ಲೈಂಗಿಕ ಹಗರಣದಲ್ಲಿ ಪ್ರಧಾನಿ ಹೆಸರು ಕೇಳಿಬಂದಿರುವುದು ಇದು ಮೊದಲ ಸಲವೇನಲ್ಲ. ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಆರೋಪ ಸಾಬೀತಾದರೆ ಬರ್ಲುಸ್ಕೋನಿ ಮೂರು ವರ್ಷ ಜೈಲು, ಅಧಿಕಾರ ದುರ್ಬಳಕೆ ಆರೋಪ ಸಾಬೀತಾದರೆ 6ರಿಂದ 12 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.