ADVERTISEMENT

ಒಬಾಮ ನೀತಿಗೆ ಸಂಸದರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ):  ಭಾರತೀಯ ವೃತ್ತಿಪರರು ಹೆಚ್ಚಾಗಿ ಬಳಸುವ ಎಚ್-1ಬಿ ಮತ್ತು ಎಲ್1 ಉದ್ಯೋಗ ವೀಸಾ ನಿರಾಕರಣೆಯ ಪ್ರಮಾಣ ಹೆಚ್ಚಳವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಪ್ರಮುಖ ಜನಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಕ್ಷೇತ್ರದ ಪ್ರಮುಖರು, ಈ ಕುರಿತ ಒಬಾಮ ಆಡಳಿತದ ನೀತಿಯ ವಿರುದ್ಧ ಧ್ವನಿ ಎತ್ತಿದ್ದಾರೆ.

ಅಲ್ಲದೇ, ಇದು ಅಮೆರಿಕದ ವ್ಯಾಪಾರ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡಲಿದೆ ಎಂದೂ ಎಚ್ಚರಿಸಿದ್ದಾರೆ.
ಕಳೆದ ವರ್ಷ ಶೇ 26ರಷ್ಟು ಎಚ್1ಬಿ ವೀಸಾ ಅರ್ಜಿಗಳನ್ನು ನಿರಾಕರಿಸಿರುವುದನ್ನು ಜನಪ್ರತಿನಿಧಿಗಳ ಸಭೆಯಲ್ಲಿ ಕೆಲವು ಸದಸ್ಯರು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ  ಕ್ಷುಲ್ಲಕ ಕಾರಣಗಳಿಗಾಗಿಯೂ ವೀಸಾಗಳನ್ನು ಸರ್ಕಾರ ನಿರಾಕರಿಸಿದೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ್ದಾರೆ.

ವಿದೇಶದ ನೌಕರರಿಗಾಗಿ ಸಲ್ಲಿಸಿರುವ ವೀಸಾ ಅರ್ಜಿಗಳನ್ನು ನಿರಾಕರಿಸುತ್ತಿರುವುದಕ್ಕೆ ಮತ್ತು `ಆರ್‌ಎಫ್‌ಇ~ ಎಂದು ಕರೆಯಲಾಗುವ ಹೆಚ್ಚುವರಿ ಸಾಕ್ಷ್ಯಗಳಿಗಾಗಿ ಹೆಚ್ಚು ಹೆಚ್ಚು ಮನವಿಗಳನ್ನು ಸರ್ಕಾರ ಮಾಡುತ್ತಿರುವುದಕ್ಕೆ ಹಲವು ಕಾರ್ಪೊರೇಟ್ ಸಂಸ್ಥೆಗಳು ಕಳವಳ ವ್ಯಕ್ತಪಡಿಸುತ್ತಿವೆ ಎಂದು  ಅಮೆರಿಕದ ನ್ಯಾಯಾಂಗ ಸಮಿತಿಯ `ವಲಸಾ ನೀತಿ ಮತ್ತು ಜಾರಿ~ ಉಪಸಮಿತಿಯ ಅಧ್ಯಕ್ಷರಾಗಿರುವ ಎಲ್ಟನ್ ಗಾಲ್ಲೆಗ್ಲಿ ಹೇಳಿದ್ದಾರೆ.

`2004ರಲ್ಲಿ  ಎಚ್-1ಬಿ ವೀಸಾ ನಿರಾಕರಣೆ ಪ್ರಮಾಣ ಶೇ 11ರಷ್ಟಿತ್ತು. 2011ರಲ್ಲಿ ಇದು ಶೇ 17ಕ್ಕೆ ಏರಿತ್ತು. ಸಾಕ್ಷ್ಯಗಳಿಗಾಗಿ ಮನವಿ (ಆರ್‌ಎಫ್‌ಇ) ಪ್ರಮಾಣ 2004ರಲ್ಲಿ ಶೇ 4ರಷ್ಟಿತ್ತು. 2011ರಲ್ಲಿ ಈ ಪ್ರಮಾಣ ಶೇ 26ಕ್ಕೆ ಏರಿಕೆಯಾಗಿದೆ `ಎಂದು ಅವರು ತಿಳಿಸಿದ್ದಾರೆ.

ಎಲ್-1ಬಿ ವೀಸಾ ನಿರಾಕರಣೆ ವಿಚಾರದಲ್ಲೂ ಇದೇ ಏರಿಕೆ ಕಂಡು ಬಂದಿದೆ. 2004ರಲ್ಲಿ ಎಲ್-1ಬಿ ವೀಸಾಕ್ಕಾಗಿ ಆರ್‌ಎಫ್‌ಇ ಪ್ರಮಾಣ ಶೇ 2ರಷ್ಟಿತ್ತು. 2011ರಲ್ಲಿ ಈ ಪ್ರಮಾಣ ಶೇ 63ಕ್ಕೆ ಏರಿದೆ ಎಂದು ಲೋಫ್ಗ್ರೆನ್ ಹೇಳಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.