ಕ್ವಾಲಾಲಂಪುರ (ಪಿಟಿಐ): ನಿಗೂಢವಾಗಿ ಕಣ್ಮರೆಯಾದ ಮಲೇಷ್ಯಾ ವಿಮಾನ ನಾಲ್ಕು ದಿನಗಳಾದರೂ ಪತ್ತೆಯಾಗದೆ ಶೋಧ ಕಾರ್ಯ ಕಗ್ಗಂಟಾಗಿ ಪರಿಣಿಮಿಸಿದೆ. ವಿಮಾನದ ಪತ್ತೆಗಾಗಿ ಮಲೇಷ್ಯಾ ಪೊಲೀಸರು ವಿಮಾನಾಪಹರಣ, ಧ್ವಂಸ, ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯ ಮಾನಸಿಕ ಅಥವಾ ವೈಯಕ್ತಿಕ ಸಮಸ್ಯೆ ಈ ನಾಲ್ಕು ಸಾಧ್ಯತೆಗಳನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಸಿದ್ದಾರೆ.
‘ನಾವು ಎಲ್ಲಾ ಆಯಾಮಗಳಿಂದಲೂ ತನಿಖೆ ಮತ್ತು ಶೋಧ ಕಾರ್ಯ ನಡೆಸುತ್ತಿದ್ದೇವೆ. ಹೊಸದಾಗಿ ನಾಲ್ಕು ಸಾಧ್ಯತೆಗಳ ಕುರಿತ ತನಿಖೆಯನ್ನು ಸಿಐಡಿ ನಿರ್ದೇಶಕ ಹದಿ ಹೊ ಅಬ್ದುಲ್ಲಾ ಅವರ ನೇತೃತ್ವದ ತಂಡ ನಡೆಸಲಿದೆ. ಜೊತೆಗೆ, ವಿಮಾನದಲ್ಲಿರುವವರ ವರ್ತನೆಯ ಮಾದರಿಯನ್ನೂ ವಿಶ್ಲೇಷಣೆ ಮಾಡಲಾಗುತ್ತಿದೆ’ ಎಂದು ಮಲೇಷ್ಯಾದ ಪೊಲೀಸ್ ಮಹಾನಿರ್ದೇಶಕ ಖಾಲಿದ್ ಅಬು ಬಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಇಬ್ಬರು ಇರಾನ್ ನಾಗರಿಕರು: ಈ ಮಧ್ಯೆ, ಕಳವು ಪಾಸ್‌ಪೋರ್ಟ್ ಬಳಸಿ ಈ ವಿಮಾನದಲ್ಲಿ ಪ್ರಯಾಣ ಮಾಡಿರುವ ಇಬ್ಬರು ಯುವಕರನ್ನು ಪೌರಿ ನೌರ್ ಮೊಹಮ್ಮದಿ (19) ಮತ್ತು ದಿಲಾವರ್ ಸಯ್ಯದ್ ಮೊಹಮ್ಮದ್ ರೆಜಾ (30) ಎಂದು ಗುರುತಿಸಲಾಗಿದೆ. ಇವರನ್ನು ಇರಾನ್ ನಾಗರಿಕರು ಎಂದು ಮಂಗಳವಾರ ಖಾತರಿ ಪಡಿಸಿರುವ ಇಂಟರ್‌ಪೋಲ್, ಇವರು ಉಗ್ರಗಾಮಿಗಳು ಎನ್ನುವ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎಂದಿದೆ.
ಈ ಇಬ್ಬರು ಯುವಕರಲ್ಲಿ ಒಬ್ಬ ಜರ್ಮನಿಗೆ ವಲಸೆ ಹೋದವನಾಗಿದ್ದು, ಆತನ ತಾಯಿ; ಮಗ ಫ್ರಾಂಕ್‌ಫರ್ಟ್‌ಗೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಯುವಕನ ತಾಯಿ ಜೊತೆ ಇಂಟರ್ ಪೋಲ್ ಸಂಪರ್ಕದಲ್ಲಿದೆ.
‘ಈ ಇಬ್ಬರು ಯುವಕರು ಇರಾನ್ ಪಾಸ್‌ಪೋರ್ಟ್ ಮೂಲಕ ದೋಹಾದಿಂದ ಕ್ವಾಲಾಲಂಪುರಕ್ಕೆ ಬಂದಿದ್ದರು. ನಂತರ ಕಳವಾಗಿರುವ ಆಸ್ಟ್ರೇಲಿಯಾ ಮತ್ತು ಇಟಲಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ನಾಪತ್ತೆಯಾಗಿರುವ ವಿಮಾನದಲ್ಲಿ ಪ್ರಯಾಣಿಸಿದ್ದಾರೆ’ ಎಂದು ಇಂಟರ್ ಪೋಲ್‌ನ ಮಹಾಕಾರ್ಯದರ್ಶಿ ರೋನಾಲ್ಡ್ ಕೆ. ನೊಬೆಲ್ ತಿಳಿಸಿದ್ದಾರೆ.
‘ಮಲೇಷ್ಯಾ ವಿಮಾನಯಾನ ಸಂಸ್ಥೆಯ 777 ಬೋಯಿಂಗ್ ವಿಮಾನ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರ ಹಿಂದೆ ಉಗ್ರರ ಕೈವಾಡ ಇದೆಯೇ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಕಳೆದ 24 ತಾಸುಗಳಲ್ಲಿ ವಿಮಾನ ನಾಪತ್ತೆ ಪ್ರಕರಣವು ತಿರುವು ಪಡೆದುಕೊಂಡಿದೆ. ಇಬ್ಬರು ಯುವಕರು ಬಹುಶಃ ಉಗ್ರರಲ್ಲ’ ಎಂದು ಹೇಳಿದ್ದಾರೆ.
ಇಬ್ಬರು ಯುವಕರು ಕಳವು ಪಾಸ್‌ಪೋರ್ಟ್ ಬಳಸಿಕೊಂಡು ಈ ವಿಮಾನದಲ್ಲಿ ಪ್ರಯಾಣಿಸಿರುವುದರಿಂದ ವಿಮಾನ ಕಣ್ಮರೆಯ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂಬ ಆತಂಕ ಎದುರಾಗಿತ್ತು.
ಮಲಾಕ ಜಲಸಂಧಿ ಕಡೆಗೆ ಪಯಣ?
ನಾಪತ್ತೆಯಾಗಿರುವ ವಿಮಾನವು ತನ್ನ ಮಾರ್ಗವನ್ನು ಬದಲಿಸಿ ಮಲಾಕ ದ್ವೀಪದ ಜಲಸಂಧಿಯತ್ತ ಸಾಗಿರಬಹುದು ಎಂದು ಮಲೇಷ್ಯಾದ ಸೇನೆ ಶಂಕಿಸಿದೆ. ಆದರೆ, ವಿಮಾನ ಪತ್ತೆಯ ತನಿಖಾ ತಂಡಕ್ಕೆ ನಿಕಟವಾಗಿರುವ ಸೇನೆಯೇತರ ಮೂಲಗಳು ಈ ವರದಿಯನ್ನು ಖಾತರಿ ಪಡಿಸಿಕೊಳ್ಳುವ ಅಗತ್ಯವಿದೆ ಎಂದಿವೆ.
‘ಕೋಟ ಭರು ಪಟ್ಟಣದ ಗಡಿ ದಾಟಿದ ನಂತರ ವಿಮಾನವು ಮಾರ್ಗ ಬದಲಿಸಿ, ತನ್ನ ನಿಗದಿತ ಕಕ್ಷೆಗಿಂತ ಕೆಳಮಟ್ಟಕ್ಕೆ ಇಳಿದಿರುವ ಸಾಧ್ಯತೆ ಇದೆ. ಇದರಿಂದಾಗಿ ವಿಮಾನವು ಮಲಾಕ ಜಲಸಂಧಿಯತ್ತ ಸಾಗಿರಬಹುದು’ ಎಂದು ಈ ಪ್ರಕರಣದ ಬಗ್ಗೆ ತಮ್ಮದೇ ತನಿಖೆ ನಡೆಸುತ್ತಿರುವ ಸೆೇನಾಧಿಕಾರಿಗಳು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಮಲೇಷ್ಯಾದಿಂದ ಹೊರಟ ಈ ವಿಮಾನವು (ಎಂಎಚ್ 370) ಕ್ವಾಲಾಲಂಪುರ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಒಂದು ತಾಸಿನ ನಂತರ ರೆಡಾರ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದೆ. ಕಣ್ಮರೆಯಾದ ಸಮಯದಲ್ಲಿ ವಿಮಾನವು ಮಲೇಷ್ಯಾದ ಪೂರ್ವ ಕರಾವಳಿ ತೀರದ ಪಟ್ಟಣ ಕೋಟ ಭರು ಮತ್ತು ವಿಯೆಟ್ನಾಂನ ದಕ್ಷಿಣ ತುದಿಯ ಮಧ್ಯೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು ಎನ್ನಲಾಗಿದೆ.
ವಾಯುಪಡೆ ರೆಡಾರ್‌ಗೆ ಪತ್ತೆ: ಈ ಮಧ್ಯೆ, ನಾಪತ್ತೆಯಾಗಿರುವ ವಿಮಾನದ ಕುರಿತು ವರದಿ ಪ್ರಕಟಿಸಿರುವ ಮಲೇಷ್ಯಾದ ‘ಬೆರಿಟಾ ಹರಿಯನ್’ ದೈನಿಕ; ವಿಮಾನವನ್ನು ಮಲೇಷ್ಯಾದ ವಾಯುಪಡೆಯ ರೆಡಾರ್ ಶನಿವಾರ ನಸುಕಿನ 2.40ರಲ್ಲಿ ಮಲಾಕ ದ್ವೀಪದ ಉತ್ತರ ತುದಿಗೆ ಇರುವ ಪುಲಾವು ಪೆರಕ್ ದ್ವೀಪದ ಬಳಿ ಪತ್ತೆ ಮಾಡಿತ್ತು. ಆಗ ವಿಮಾನವು 29,500 ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು ಎಂದು ವಾಯುಪಡೆಯ ಮುಖ್ಯಸ್ಥರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ವಾಯುಪಡೆ ಮುಖ್ಯಸ್ಥರು ತಿಳಿಸಿರುವ ವಿಮಾನ ಪತ್ತೆಯಾದ (ನಸುಕಿನ 2.40) ಸಮಯಕ್ಕೂ ವಿಮಾನವು ಲಗಾರಿ ವಾಯು ಸಂಚಾರ ನಿಯಂತ್ರಣ (ಎಟಿಸಿ) ಸಂಪರ್ಕದಿಂದ ಕಡಿತಗೊಂಡ ಸಮಯಕ್ಕೂ ಒಂದು ಗಂಟೆ ಹತ್ತು ನಿಮಿಷಗಳ ಕಾಲದ ಅಂತರ ಇದೆ. ಆದರೆ, ವಾಯುಪಡೆ ರೆಡಾರ್‌ಗೆ ವಿಮಾನ ಪತ್ತೆಯಾದ ನಂತರ ಏನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ.
ವಾಯುಪಡೆಯ ವರದಿಯನ್ನು ಅನುಸರಿಸುವುದಾದರೆ ವಿಮಾನವು ಅದೇ ಎತ್ತರದಲ್ಲಿ (29,500 ಅಡಿ) ವಿಹರಿಸಿ ಸುಮಾರು 500 ಕಿ.ಮೀ. ಸಾಗಿರಬಹುದು. ಆಗ ಅದರ ಸಂಪರ್ಕ ಸಾಧನಗಳು ನಿಷ್ಕ್ರಿಯವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.