ADVERTISEMENT

ಕಚ್ಚಾ ತೈಲದ ಬೆಲೆ 12 ವರ್ಷದಲ್ಲೇ ಕನಿಷ್ಠ

ನಿರ್ಬಂಧ ತೆರವಿನಿಂದ ಇರಾನ್‌ನಲ್ಲಿ ಹೆಚ್ಚಿದ ತೈಲ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2016, 4:46 IST
Last Updated 19 ಜನವರಿ 2016, 4:46 IST
ಕಚ್ಚಾ ತೈಲದ ಬೆಲೆ 12 ವರ್ಷದಲ್ಲೇ ಕನಿಷ್ಠ
ಕಚ್ಚಾ ತೈಲದ ಬೆಲೆ 12 ವರ್ಷದಲ್ಲೇ ಕನಿಷ್ಠ   

ಸಿಂಗಪುರ (ಎಎಫ್‌ಪಿ): ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮಂಗಳವಾರ ಪ್ರತಿ ಬ್ಯಾರಲ್‌ಗೆ 30 ಡಾಲರ್‌ಗಳಿಗೆ ಇಳಿದಿದೆ. ಇದು ಕಳೆದ 12 ವರ್ಷಗಳಲ್ಲಿ ದಾಖಲಾಗಿರುವ ಕನಿಷ್ಠ ಬೆಲೆಯಾಗಿದೆ.

ಅಮೆರಿಕ ಮತ್ತು ಯೂರೋಪ್‌ ಒಕ್ಕೂಟಗಳು ಇರಾನ್‌ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧ  ವಾಪಸ್‌ ಪಡೆಯುತ್ತಿರುವುದಾಗಿ ಸೋಮವಾರ ಘೋಷಿಸಿದ್ದವು. ಈ ಘೋಷಣೆ ಹೊರಬಿದ್ದ   ಬೆನ್ನಲ್ಲೇ, ಇರಾನ್‌ ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸುವುದಾಗಿ ಪ್ರಕಟಿಸಿತ್ತು. ಇರಾನಿನ ರಾಷ್ಟ್ರೀಯ ತೈಲ ಕಂಪೆನಿ ಪ್ರತಿ ದಿನ 5 ಲಕ್ಷ ಬ್ಯಾರಲ್‌ ತೈಲ  ಉತ್ಪಾದನೆ ಮಾಡುವುದಾಗಿ ಹೇಳಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಚ್ಚಾ ತೈಲದ ಪೂರೈಕೆ ಭಾರಿ ಪ್ರಮಾಣದಲ್ಲಿ ಹೆಚ್ಚುವ ಸಾಧ್ಯತೆ ಇದ್ದು, ಬೆಲೆಯಲ್ಲಿ ದಾಖಲೆ ಕುಸಿತ ಕಂಡುಬಂದಿದೆ.  ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ 2003ರ ಮಟ್ಟಕ್ಕೆ ಇಳಿದಿದೆ.

ಸದ್ಯ ಇರಾನ್‌ ಪ್ರತಿ ದಿನ 28 ಲಕ್ಷ ಬ್ಯಾರಲ್‌ ತೈಲ ಉತ್ಪಾದಿಸುತ್ತಿದೆ. ಆದರೆ, ಇದರಲ್ಲಿ 10 ಲಕ್ಷ ಬ್ಯಾರಲ್‌ ತೈಲ ಮಾತ್ರ ರಫ್ತಾಗುತ್ತಿದೆ. ಅಮೆರಿಕ ಮತ್ತು ಯೂರೋಪ್‌ ಒಕ್ಕೂಟಗಳು ವಿಧಿಸಿರುವ ನಿರ್ಬಂಧ  ಹಿಂಪಡೆದರೆ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸುವುದಾಗಿ ಇರಾನ್‌ ಹೇಳಿತ್ತು. ಸದ್ಯ ನಿಷೇಧ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಮತ್ತು ರಫ್ತು ಹೆಚ್ಚಲಿದೆ. 

ಹೀಗಾದಲ್ಲಿ ಇರಾನ್‌ನಿಂದ 30 ಲಕ್ಷ ಬ್ಯಾರೆಲ್‌ ಕಚ್ಚಾತೈಲ ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗಲಿದೆ. ಇದ ರಿಂದ ಜಾಗತಿಕ ತೈಲ ಸಂಗ್ರಹ ಇನ್ನಷ್ಟು ಹೆಚ್ಚಾಗಲಿದ್ದು, ಮತ್ತಷ್ಟು ಬೆಲೆ ಕುಸಿತಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT