ADVERTISEMENT

ಕಾಬೂಲ್‌– ನವದೆಹಲಿ ನೇರಮಾರ್ಗ ಪ್ರಸ್ತಾವ ತಿರಸ್ಕರಿಸಿದ ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಇಸ್ಲಾಮಾಬಾದ್‌ (ಪಿಟಿಐ): ವಾಘಾ ಗಡಿ ಮೂಲಕ ಭಾರತಕ್ಕೆ  ಸಂಪರ್ಕ ಕಲ್ಪಿಸುವ ಆಫ್ಘಾನಿಸ್ತಾನದ ನೇರಮಾರ್ಗ ಪ್ರಸ್ತಾವವನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಜಂಟಿ ಆರ್ಥಿಕ ಆಯೋಗದ 10ನೇ ಅಧಿವೇಶನದಲ್ಲಿ ಗಡಿ ಪ್ರವೇಶ ಹೊರತುಪಡಿಸಿ ಈಗಾಗಲೇ ನಡೆದಿರುವ  ದ್ವಿಪಕ್ಷೀಯ ಒಪ್ಪಂದ ಜಾರಿಗೊಳಿಸುವ ಬಗ್ಗೆ ಪಾಕಿಸ್ತಾನ ಹಣಕಾಸು ಸಚಿವ ಇಸಾಕ್‌ ದರ್‌ ಮತ್ತು ಅಫ್ಘಾನಿಸ್ತಾನ ಹಣಕಾಸು ಸಚಿವ ಎಕ್ಲಿಲ್‌ ಅಹಮದ್‌ ಹಕೀಮ್‌ ಒಪ್ಪಿದರು.

ವಾಘಾ ಗಡಿಯ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ಮಧ್ಯೆ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಪ್ರಸ್ತಾವವನ್ನು ಅಫ್ಘಾನಿಸ್ತಾನ ಪಾಕ್‌ ಮುಂದಿಟ್ಟಿತ್ತು. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಈ ಪ್ರಸ್ತಾವವನ್ನು ಪಾಕಿಸ್ತಾನ ತಿರಸ್ಕರಿಸಿದೆ ಎಂದು ಪಾಕ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಬೂಲ್‌ನಿಂದ ವಾಘಾ ಗಡಿವರೆಗೆ ಸರಕುಗಳನ್ನು ಸಾಗಿಸಲು ಆಫ್ಘಾನಿಸ್ತಾನದ ಲಾರಿಗಳಿಗೆ ಅವಕಾಶವಿದೆ. ಆದರೆ ವಾಘಾ ಗಡಿಯಿಂದ ಕಾಬೂಲ್‌ಗೆ ಅವು ಸರಕುಗಳನ್ನು ಸಾಗಿಸುವಂತಿಲ್ಲ. ಈ ನಿರ್ಬಂಧವನ್ನು ತೆಗೆದುಹಾಕಬೇಕು ಎಂಬ ಆಫ್ಘಾನಿಸ್ತಾನದ ಪ್ರಸ್ತಾವವನ್ನೂ ಪಾಕ್ ತಿರಸ್ಕರಿಸಿದೆ.

ಆಫ್ಘನ್ ಗಡಿ ಮೂಲಕ ತಜಕಿಸ್ತಾನ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಪಾಕಿಸ್ತಾನದ ಪ್ರಸ್ತಾವವನ್ನು ಆಫ್ಘಾನಿಸ್ತಾನ ಸಹ ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.