ADVERTISEMENT

ಕಾಲಿನಲ್ಲಿ ಗಡ್ಡೆ: ಯುವಕನಿಗೆ ಕ್ಲಿಷ್ಟ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಹನೋಯ್ (ಎಎಫ್‌ಪಿ):  ತನ್ನ ಬಲಗಾಲಿನಲ್ಲಿ ದೇಹದ ಗಾತ್ರಕ್ಕಿಂತಲೂ ಹೆಚ್ಚು ತೂಕದ ಗಡ್ಡೆ ಹೊಂದಿರುವ ಯುವಕನನ್ನು ವಿಯೆಟ್ನಾಂ ಆಸ್ಪತ್ರೆಯೊಂದರಲ್ಲಿ ಗುರುವಾರ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

90 ಕೆ.ಜಿ ತೂಕದ ಭಾರಿ ಗಡ್ಡೆ ಹೊಂದಿರುವ 31 ವರ್ಷದ ಗೂಯೆನ್ ದುಯ್ ಹೈ ಎಂಬಾತನನ್ನು 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.  ಈ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟ ಹಾಗೂ ಅಪಾಯಕಾರಿಯಾಗಿದ್ದು ಇದರ ಯಶಸ್ಸಿನ ಪ್ರಮಾಣ ಶೇ 50ರಷ್ಟು ಇದೆ. ಶಸ್ತ್ರಚಿಕಿತ್ಸೆ ವೇಳೆ ಯಾವುದೇ ಸಂದರ್ಭದಲ್ಲಿ  ಅಥವಾ ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯ ಯಾವುದೇ ಅವಧಿಯಲ್ಲಿ ರೋಗಿಯ ಸಾವು ಸಂಭವಿಸಬಹುದು ಎಂದು ಫ್ರಾನ್ಸ್- ವಿಯೆಟ್ನಾಂ ಆಸ್ಪತ್ರೆಯ ತಜ್ಞರು ವಿವರಿಸಿದ್ದಾರೆ.

ಹೈ ನಾಲ್ಕು ವರ್ಷದ ಮಗುವಾಗಿದ್ದಾಗ ಕಾಲಿನಲ್ಲಿ ಬೆಳೆಯಲು ಆರಂಭಿಸಿದ ಗಡ್ಡೆ ಇನ್ನೂ ಬೆಳೆಯುತ್ತಲೇ ಇದೆ. ವೈದ್ಯರ ಪ್ರಕಾರ, ವಂಶವಾಹಿ ನ್ಯೂನತೆಯೇ ಅತ್ಯಂತ ಅಪರೂಪದ ಈ ಸಮಸ್ಯೆಗೆ ಕಾರಣ. ಇದು ಕ್ಯಾನ್ಸರ್ ಗಡ್ಡೆಯಲ್ಲ; ಆದರೆ ದಿನೇ ದಿನೇ ಬೆಳೆಯುತ್ತಿರುವುದರಿಂದ ತೊಂದರೆಯಾಗಿದೆ.

ವಿಯೆಟ್ನಾಂ ರಾಷ್ಟ್ರದಲ್ಲೇ ವ್ಯಕ್ತಿಯೊಬ್ಬನ ದೇಹದಲ್ಲಿರುವ ಅತಿ ದೊಡ್ಡ ಗಡ್ಡೆ ಇದಾಗಿದ್ದು, ಇದರಿಂದ ಹೈಗೆ ನಡೆದಾಡುವುದು ಹಾಗೂ ಮಲಗುವುದು ಬಲು ತ್ರಾಸದಾಯಕವಾಗಿ ಪರಿಣಮಿಸಿದೆ. ಇದಕ್ಕೆ ಮುನ್ನ ಹೈ 17 ವರ್ಷದವನಾಗಿದ್ದಾಗ ಈ ಗಡ್ಡೆಯ ತೊಂದರೆಯಿಂದಾಗಿ ಕಾಲಿನ ಸ್ವಲ್ಪ ಭಾಗವನ್ನು ಕತ್ತರಿಸಲಾಗಿತ್ತು.

ಅಮೆರಿಕದ ವೈದ್ಯ ಮೆಕೆ ಮೆಕಿನ್ನಾನ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ಕೈಗೊಂಡಿದೆ. ಇದೇ ಮೆಕಿನ್ನಾನ್ 2004ರಲ್ಲಿ ರುಮೇನಿಯಾದ ಮಹಿಳೆಯೊಬ್ಬರ ದೇಹದಲ್ಲಿದ್ದ 80 ಕೆ.ಜಿ  ತೂಕದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.