ADVERTISEMENT

ಕೃತಿ ನಿಷೇಧಕ್ಕೆ ಭಾರತೀಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಕ್ವಾಲಾಲಂಪುರ (ಐಎಎನ್‌ಎಸ್): ಜನಾಂಗೀಯ ನಿಂದನೆ ಮಾಡಲಾಗಿದ್ದ ವಿಷಯವಿರುವ ಕೃತಿಯೊಂದನ್ನು ಶಾಲಾ ಪಠ್ಯ ಪುಸ್ತಕವನ್ನಾಗಿ ಮಾಡಿರುವುದು ಸರಿಯಲ್ಲ, ಇದನ್ನು  ನಿಷೇಧಿಸಬೇಕೆಂದು ಆಗ್ರಹಿಸಿ ಭಾರತೀಯ ಮೂಲದವರು ಇಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಂಘಟನೆಯೊಂದರ ಜತೆ ಭಾರತೀಯ ಮೂಲದವರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆಂದು ಆರೋಪಿಸಿ  ಮಲೇಷ್ಯಾ ಪ್ರಧಾನಿ ನಜೀಬ್ ತುನ್ ರಜಾಕ್ ತಮ್ಮ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಮಲೇಷ್ಯಾಕ್ಕೆ ಕೆಟ್ಟ ಹೆಸರನ್ನು ತರುವ ಉದ್ದೇಶದಿಂದಲೇ ಭಾನುವಾರ  ಹಿಂದೂ ಹಕ್ಕುಗಳ ಕಾರ್ಯಪಡೆ ಗೊಂದಲ ಉಂಟು ಮಾಡುತ್ತಿದೆ ಎಂದು ಪ್ರಧಾನಿ ನಜೀಬ್ ಹೇಳಿದ್ದಾರೆ. 

ಎಪ್ಪತ್ತರ ದಶಕದಲ್ಲಿ ಪ್ರಕಟವಾಗಿದ್ದ ‘ಇಂಟರ್‌ಲಾಕ್’ ಎಂಬ ಕೃತಿಯ ಬಗ್ಗೆ ಈಗ ಎಲ್ಲರೂ ಕೆಂಡ ಕಾರುತ್ತಿದ್ದಾರೆ. ಭಾರತೀಯ ಸಮುದಾಯ ಹಾಗೂ ಜಾತೀ ವ್ಯವಸ್ಥೆಯ ವಿಷಯವನ್ನು ಒಳಗೊಂಡಿರುವ  ಈ ಕಾದಂಬರಿಯನ್ನು ಕೆಲವು ಶಾಲೆಗಳಲ್ಲಿ  ಪಠ್ಯಪುಸ್ತಕವಾಗಿ  ಮಾಡಿರುವುದನ್ನು  ವಿರೋಧಿಸಿ ಹಿಂದೂ ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿದ್ದವು. ಭಾರತೀಯ ಸಂಸ್ಕೃತಿ ಎಂದರೆ ಜನಾಂಗೀಯ ತಾರತಮ್ಯಗಳೇ ಆಗಿವೆ ಎಂಬಂತೆ ಆ ಪುಸ್ತಕದಲ್ಲಿ ಬಿಂಬಿಸಲಾಗಿದೆ ಎಂದೂ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT