ಸಿಂಫೆರೊಪಾಲ್ (ಎಎಫ್‌ಪಿ): ಉಕ್ರೇನ್ನಿಂದ ಬೇರ್ಪಟ್ಟು, ರಷ್ಯಾದೊಂದಿಗೆ ಸೇರಲು ಅಥವಾ ಸ್ವಾಯತ್ತ ದೇಶವಾಗಲು ಕ್ರಿಮಿಯಾ ಗಣರಾಜ್ಯದಲ್ಲಿ ಭಾನುವಾರ ನಡೆದ ಜನಮತ ಗಣನೆಯಲ್ಲಿ ಸಾಕಷ್ಟು ಸಂಖ್ಯೆಯ ಜನರು ಭಾಗವಹಿಸಿ ಮತದಾನ ಮಾಡಿದರು.
ಬಹುತೇಕ ರಷ್ಯಾ ಮೂಲನಿವಾಸಿಗಳೇ ಹೆಚ್ಚಿರುವ ಈ ವಜ್ರದಾಕಾರದ ಕಪ್ಪು ಸಮುದ್ರ ಪರ್ಯಾಯ ದ್ವೀಪದಲ್ಲಿ ೧೫ ಲಕ್ಷ ಜನರು ಜನಮತಗಣನೆ ಮತದಾನದಲ್ಲಿ ಪಾಲ್ಗೊಂಡಿದ್ದರು.
ಜನಮತಗಣನೆಯ ಫಲಿತಾಂಶವನ್ನು ತಾವು ಮಾನ್ಯ ಮಾಡುವುದಿಲ್ಲ ಎಂದು ರಷ್ಯಾ ಹೊರತುಪಡಿಸಿ, ಉಕ್ರೇನ್ನ ಹೊಸ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯ ಈಗಾಗಲೇ ಸ್ಪಷ್ಟಪಡಿಸಿವೆ.
ಕಳೆದ ತಿಂಗಳು ಉಕ್ರೇನ್‌ನಲ್ಲಿ ಅಧ್ಯಕ್ಷವಿಕ್ಟರ್ ಯನುಕೋವಿಚ್ ಅವರ ವಿರುದ್ಧ ಪ್ರತಿಭಟನೆ ನಡೆದು, ಅವರನ್ನು ಪದಚ್ಯುತಿಗೊಳಿಸಿದ ನಂತರ ಹೊಸ ಹಂಗಾಮಿ ಸರ್ಕಾರ ಸ್ಥಾಪನೆಯಾಗಿದೆ.
ಆನಂತರ ರಷ್ಯಾ ಸರ್ಕಾರಿ ಸೇನೆ ಮತ್ತು ಅದರ ಪರವಿರುವ ಪ್ರಜಾ ಸೇನೆ, ಉಕ್ರೇನ್ ಆಡಳಿತವಿದ್ದ ಕ್ರಿಮಿಯಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಕ್ರಿಮಿಯಾ ಸಂಸತ್ ಕೂಡ ರಷ್ಯಾ ಪರನಿರ್ಣಯ ಕೈಗೊಂಡಿದೆ.
ಉಕ್ರೇನ್ ಮತ್ತು ರಷ್ಯಾ ಸೇನೆಗಳು ಈಗ ಕ್ರಿಮಿಯಾ ಗಡಿಯಲ್ಲಿವೆ. ವಿಶ್ವಸಂಸ್ಥೆ, ಅಮೆರಿಕ, ಐರೋಪ್ಯ ಒಕ್ಕೂಟ ಸೇರಿ ಅಂತರರಾಷ್ಟ್ರೀಯ ಸಮುದಾಯ, ರಷ್ಯಾದ ಹಸ್ತಕ್ಷೇಪವನ್ನು ವಿರೋಧಿಸಿವೆ.
ಭದ್ರತಾ ಮಂಡಳಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಶನಿವಾರ ರಾತ್ರಿ ಮಂಡಿಸಿದ ನಿರ್ಣಯವನ್ನು ರಷ್ಯಾ ತನ್ನ ವಿಟೊ ಅಧಿಕಾರ ಬಳಸಿ ತಿರಸ್ಕರಿಸಿದ್ದು, ಚೀನಾ ಈ ಸಭೆಗೆ ಗೈರುಹಾಜರಾಗಿತ್ತು.
ಇದರಿಂದ ಪೂರ್ವ ಯೂರೋಪ್ ಗಡಿಯಲ್ಲಿರುವ ಈ ಗಣರಾಜ್ಯದಲ್ಲಿ ಶೀತಲಸಮರ ಮಾದರಿಯ ಭದ್ರತಾ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಭೀತಿ ನಿರ್ಮಾಣವಾಗಿದ್ದು, ಇದನ್ನು ಖಂಡಿಸಿ ಪ್ರತಿಭಟನೆಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.