ADVERTISEMENT

ಗಡಾಫಿ ಆಸ್ತಿ ಮುಟ್ಟುಗೋಲು: ಕೆನಡಾ ಮಸೂದೆ.

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST
ಗಡಾಫಿ ಆಸ್ತಿ ಮುಟ್ಟುಗೋಲು: ಕೆನಡಾ ಮಸೂದೆ.
ಗಡಾಫಿ ಆಸ್ತಿ ಮುಟ್ಟುಗೋಲು: ಕೆನಡಾ ಮಸೂದೆ.   

4ವೈಮಾನಿಕ ದಾಳಿ ನಿರಾಕರಿಸಿದ ಗಡಾಫಿ ಪುತ್ರ 4ಆರು ಸಾವಿರ ಮಂದಿ ಹತ್ಯೆಯಾಗಿರುವ ಅಂದಾಜು 4ನಿರಾಶ್ರಿತರ ರಕ್ಷಣೆಗೆ ಇಟಲಿ ಮುಂದು4ವೆನೆಜುವೆಲಾ ಮಧ್ಯಸ್ಥಿಕೆಗೆ ಅಮೆರಿಕ ವಿರೊಧ 4ನಾಗರಿಕ ಅಂತಃಕಲಹ ಸಾಧ್ಯತೆ- ರಷ್ಯ

ಟೊರಾಂಟೊ,  (ಐಎಎನ್‌ಎಸ್/ಪಿಟಿಐ): ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ ರಹಸ್ಯವಾಗಿ ಇಟ್ಟಿದ್ದ ಎರಡು ಶತಕೋಟಿ ಡಾಲರ್ ಹಣವನ್ನು ಮುಟ್ಟುಗೊಲು ಹಾಕಿಕೊಂಡಿರುವ ಕೆನಡಾ, ವಿದೇಶಿ ಸರ್ವಾಧಿಕಾರಿಗಳು ಮತ್ತು ಅವರ ನಿಕಟವರ್ತಿಗಳು ದೇಶದಲ್ಲಿ ಇಟ್ಟಿರುವ ಇಂತಹ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮಸೂದೆಯೊಂದನ್ನು ಮಂಡಿಸಿದೆ.

ವಿಶ್ವಸಂಸ್ಥೆಯು ಯಾವುದೇ ದೇಶದ ಮೇಲೆ ದಿಗ್ಭಂಧನ ಹೇರಿದ್ದರೆ, ಅಂತಹ ದೇಶಗಳ ಮಂದಿ ಕೆನಡಾದಲ್ಲಿ ಹೊಂದಿರುವ ಕಪ್ಪುಹಣದ ವಿರುದ್ಧದ ಕ್ರಮಕ್ಕೆ ಕೆನಡಾ ಕಾಯಿದೆ ಅನ್ವಯಿಸುತ್ತದೆ. ಗಡಾಫಿ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ಈ ಕಾನೂನನ್ನೇ ಕೆನಡಾ ಬಳಸಿಕೊಂಡಿದೆ.ವಿಶ್ವದ ಇತರೇ ಸರ್ವಾಧಿಕಾರಿಗಳು ಹೊಂದಿರುವ ಇಂತಹ ಹಣದ ಮೇಲೂ ಕೆನಡಾ ಈಗ ಕಣ್ಣು ಹಾಕಿದೆ. ಈ ಮಸೂದೆ ಅಂಗೀಕಾರ ಪಡೆದರೆ ಟ್ಯುನಿಷಿಯಾ ಸರ್ವಾಧಿಕಾರಿ ಬೆನ್ ಅಲಿಯ ಸೋದರ ಸಂಬಂಧಿ ಕೆನಡಾದಲ್ಲಿ ರಹಸ್ಯವಾಗಿ ಇಟ್ಟಿರುವ ಲಕ್ಷಾಂತರ ಡಾಲರ್ ಹಣವನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ವೈಮಾನಿಕ ದಾಳಿ ನಿರಾಕರಣೆ (ಟ್ರಿಪೋಲಿ ವರದಿ):  ಲಿಬಿಯಾದಲ್ಲಿ ಗಡಾಫಿ ಅವರ ವಿರುದ್ಧ ನಡೆಯುತ್ತಿರುವ ದಂಗೆಯನ್ನು ಹತ್ತಿಕ್ಕಲು ಟ್ರಿಪೋಲಿಯಲ್ಲಿ ವೈಮಾನಿಕ ದಾಳಿ ನಡೆಸಲಾಗುತ್ತದೆ ಎನ್ನುವ ಮಾಧ್ಯಮ ವರದಿಗಳನ್ನು ಮುಅಮ್ಮರ್ ಗಡಾಫಿ ಅವರ ಪುತ್ರ ಸೈಫ್  ಅಲ್ ಇಸ್ಲಾಂ ಅಲ್ಲಗಳೆದಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಅಂತಹ ದಾಳಿ ನಡೆಸಿಲ್ಲ ಎಂದವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.


ಆದರೆ ಲಿಬಿಯಾದ ಮಾನವ ಹಕ್ಕುಗಳ ಸಂಸ್ಥೆಯ ಪ್ರಕಾರ ದೇಶದಲ್ಲಿ ಇದುವರೆಗೆ ಸುಮಾರು ಆರು ಸಾವಿರ ಪ್ರತಿಭಟನಾಕಾರರನ್ನು ಹತ್ಯೆ ಮಾಡಲಾಗಿದ್ದು, ಟ್ರಿಪೋಲಿ ಒಂದರಲ್ಲಿಯೇ ಮೂರು ಸಾವಿರ ಮಂದಿಯನ್ನು ಕೊಲ್ಲಲಾಗಿದೆ ಎಂದು ಅಂದಾಜು ಮಾಡಿದೆ

.ನಾಗರಿಕ ಯುದ್ಧ ಸಾಧ್ಯತೆ, (ಮಾಸ್ಕೊ ವರದಿ):  ಲಿಬಿಯಾದಲ್ಲಿ ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ ಅಲ್ಲಿ ನಾಗರಿಕ ಅಂತಃಕಲಹ ನಡೆಯುವ ಸಾಧ್ಯತೆ ಇದೆ ಎಂದು ರಷ್ಯದ ಅಧ್ಯಕ್ಷ ಡಿಮಿಟ್ರಿ ಮೆಡ್ವಡೇವ್ ಆತಂಕ ವ್ಯಕ್ತಪಡಿಸಿದ್ದಾರೆ.

 

ಲಿಬಿಯಾದಲ್ಲಿನ ಪರಿಸ್ಥಿತಿ ಹಾಗೂ ನಾಗರಿಕ ಯುದ್ಧಕ್ಕೆ ಅಣಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಷ್ಯನ್ನರೂ ಸೇರಿದಂತೆ ವಿದೇಶಿ ನಾಗರಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದು ನಮ್ಮ ಮುಂದಿರುವ ಗುರಿ ಎಂದು ತಿಳಿಸಿದ್ದಾರೆ


.ನಿರಾಶ್ರಿತರ ರಕ್ಷಣೆಗೆ ಇಟಲಿಯ ವಿಮಾನ, ಹಡಗು: (ರೋಮ್ ವರದಿ):
  ಲಿಬಿಯಾದಲ್ಲಿನ ಅಶಾಂತಿಯ ವಾತಾವರಣದಿಂದಾಗಿ ಅಲ್ಲಿ ನಿರಾಶ್ರಿತರಾಗಿರುವ ಜನರನ್ನು ಸುರಕ್ಷಿತವಾಗಿ ಕರೆ ತರಲು ಇಟಲಿ ವಿಮಾನ ಮತ್ತು ಹಡಗುಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವ ಫ್ರಾಂಕೊ ಪ್ರಟ್ಟಿನಿ ತಿಳಿಸಿದ್ದಾರೆ.

ಟ್ಯುನಿಷಿಯಾ, ಲಿಬಿಯಾ ಗಡಿಯಲ್ಲಿರುವ ಜನರ ರಕ್ಷಣೆ ಮಾಡುವುದು ಹಾಗೂ ನಿರಾಶ್ರಿತರಾಗಿರುವವರಿಗೆ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ನೀಡಲು ಇಟಲಿ ಮುಂದಾಗಿದೆ ಎಂದೂ ಅವರು ತಿಳಿಸಿದ್ದಾರೆ.


ಮಧ್ಯಸ್ಥಿಕೆಗೆ ವಿರೋಧ (ವಾಷಿಂಗ್ಟನ್ ವರದಿ): ಲಿಬಿಯಾದ ಮುಖಂಡ ಗಡಾಫಿ ಜತೆ ಮಧ್ಯಸ್ಥಿಕೆ ವಹಿಸುವ ವೆನೆಜುವೇಲಾ ಇಂಗಿತವನ್ನು ಅಮೆರಿಕ ವಿರೋಧಿಸಿದೆ.
ಅಂತರರಾಷ್ಟ್ರೀಯ ಸಮುದಾಯದ ಕರೆಗೆ ಗಡಾಫಿ ಓಗೊಡದ ಮೇಲೆ ಅವರೊಂದಿಗೆ ಮಧ್ಯಸ್ಥಿಕೆ ವಹಿಸಿಯೂ ಪ್ರಯೋಜನವೇನು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಪಿ.ಜೆ.ಕ್ರೌಲಿ ಪ್ರಶ್ನಿಸಿದ್ದಾರೆ. ಬದಲಾಗಿ ಗಡಾಫಿ ಜನರಿಗೆ ತಲೆಬಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯ ಮಾಡಿದ್ದಾರೆ.

ಹುದ್ದೆಯಿಂದ ಕೆಳಗಿಳಿದ ನಿರ್ದೇಶಕ: (ಲಂಡನ್ ವರದಿ):   ಗಡಾಫಿ ಅವರ ಆಡಳಿತೊಂದಿಗೆ ಆರ್ಥಿಕ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್‌ಎಸ್‌ಇ) ನಿರ್ದೇಶಕ ಸರ್ ಹಾರ್ವರ್ಡ್ ಡೇವೀಸ್ ಅವರು ಸಂಸ್ಥೆಯ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
 ಸಂಶೋಧನೆ ನಿಧಿಗಾಗಿ ಗಡಾಫಿ ಅವರಿಂದ 15 ದಶಲಕ್ಷ ಪೌಂಡ್ ಹಣವನ್ನು ಪಡೆಯಲು ಅನುಮತಿ ನೀಡಿರುವ ಆರೋಪ ಡೇವೀಸ್ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT