ADVERTISEMENT

ಗಡಾಫಿ ಯ ರಹಸ್ಯ ನೆಲಮಾಳಿಗೆ!

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 19:00 IST
Last Updated 26 ಆಗಸ್ಟ್ 2011, 19:00 IST
ಗಡಾಫಿ ಯ ರಹಸ್ಯ ನೆಲಮಾಳಿಗೆ!
ಗಡಾಫಿ ಯ ರಹಸ್ಯ ನೆಲಮಾಳಿಗೆ!   

ಲಂಡನ್ (ಪಿಟಿಐ): ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ, ರಾಜಧಾನಿ ಟ್ರಿಪೋಲಿಯಲ್ಲಿ ರಹಸ್ಯ ನೆಲಮಾಳಿಗೆ ನಿರ್ಮಿಸಿಕೊಂಡಿರುವ ವಿಷಯ ಇದೀಗ ಬಹಿರಂಗಗೊಂಡಿದೆ.

ಈ ನೆಲಮಾಳಿಗೆಯನ್ನು ವರ್ಣಿಸುವ ಬಂಡುಕೋರ ನಾಯಕರು, `ಇಲ್ಲಿರುವ ನಗರ ಅಕ್ಷರಶಃ ಟ್ರಿಪೋಲಿಯನ್ನೇ ಹೋಲುತ್ತದೆ. ಅಷ್ಟ ದಿಕ್ಕುಗಳಿಗೆ ಚಾಚಿಕೊಂಡಿರುವ ಉದ್ದನೆಯ ಸುರಂಗವನ್ನು ನೋಡಿದರೆ ಅಚ್ಚರಿಯಾಗುತ್ತದೆ~ ಎಂದು ಉದ್ಗರಿಸಿದ್ದಾರೆ.

`ಸೇನಾ ನಿಯಂತ್ರಣ ಕೇಂದ್ರದ ಈ ನೆಲಮಾಳಿಗೆಯ ಮೂಲಕವೇ ಗಡಾಫಿ ಇಡೀ ಟ್ರಿಪೋಲಿ ನಗರದಲ್ಲಿ ಯಾರಿಗೂ ಕಾಣದಂತೆ ಎಲ್ಲಿ ಬೇಕಾದರೂ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ಈಗ ಅವರು ಇಲ್ಲಿಂದಲೇ ತಪ್ಪಿಸಿಕೊಂಡು ಹೋಗಿರಬಹುದು~ ಎಂದು `ದಿ ಟೆಲಿಗ್ರಾಫ್~ ವರದಿ ಮಾಡಿದೆ.

ಅಂದಹಾಗೆ ಈ ಸುರಂಗಗಳು ಸಣ್ಣ ವಾಹನಗಳನ್ನು ನಿಲ್ಲಿಸುವಷ್ಟು ದೊಡ್ಡದಿವೆ. ದಪ್ಪನೆಯ ಕಾಂಕ್ರೀಟ್ ಗೋಡೆಗಳು ಹಾಗೂ ಲೋಹದ ಕಿಟಕಿಗಳನ್ನು ಹೊಂದಿರುವ ಇವುಗಳಲ್ಲಿ ಏನಿಲ್ಲವೆಂದರೂ ಇಬ್ಬರು ಆರಾಮವಾಗಿ ಓಡಾಡಬಹುದು.

ಇಲ್ಲಿನ ಕೆಲವು ಮೊಗಸಾಲೆಗಳಲ್ಲಿ ಬಾಂಬ್ ನಿರೋಧಕ ಬಂಕರ್‌ಗಳು ಇವೆ. ನೂರಾರು ದೂರವಾಣಿಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿವೆ.


ಸಂಪತ್ತು ಬಿಡುಗಡೆಗೆ ಅನುಮತಿ
ವಿಶ್ವಸಂಸ್ಥೆ (ಪಿಟಿಐ):
ಯುದ್ಧಪೀಡಿತ ಲಿಬಿಯಾ ಜನತೆಗೆ ಮಾನವೀಯ ನೆರವು ನೀಡಲು ಅಮೆರಿಕದ ಸುಪರ್ದಿಯಲ್ಲಿರುವ  1.5 ಶತಕೋಟಿ ಡಾಲರ್ ಲಿಬಿಯಾ ಸಂಪತ್ತನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ ಶುಕ್ರವಾರ ಅನುಮತಿ ನೀಡಿದೆ.

ಹಲವು ಉಗ್ರರು ಪರಾರಿ
ಟ್ರಿಪೋಲಿ (ಐಎಎನ್‌ಎಸ್):
ಸರ್ಕಾರಿ ವಿರೋಧಿ ಬಂಡುಕೋರರು ಟ್ರಿಪೋಲಿಯನ್ನು ಕೈವಶ ಮಾಡಿಕೊಳ್ಳುತ್ತಿದ್ದಂತೆಯೇ, ಲಿಬಿಯಾದ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಹಲವಾರು ಉಗ್ರರು ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಅಲ್ಜೀರಿಯಾ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT