ಲಂಡನ್ (ಪಿಟಿಐ): `ಗರ್ಭಪಾತ ಕಾನೂನಿಗೆ ಸಂಬಂಧಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು' ಎಂದು ಐರ್ಲೆಂಡ್ ಪ್ರಧಾನಿ ಎಂಡಾ ಕೆನ್ನಿ ಭರವಸೆ ನೀಡಿದ್ದಾರೆ.
ಅಲ್ಲದೇ ಈ ವಿಷಯವನ್ನು ಸೌಹಾರ್ದಯುತ ರೀತಿಯಲ್ಲಿ ಸೂಕ್ಷ್ಮವಾಗಿ ಚರ್ಚಿಸಬೇಕೆಂದೂ ಅವರು ಹೇಳಿದ್ದಾರೆ.
ಗರ್ಭಪಾತ ಕಾನೂನು ಕುರಿತು ತಜ್ಞರ ತಂಡ ಸಲ್ಲಿಸಿದ ವರದಿಯು ಮಂಗಳವಾರ ಸಂಪುಟ ಸಭೆಯಲ್ಲಿ ಚರ್ಚೆಯಾದ ಬೆನ್ನಲ್ಲಿಯೇ ಸರ್ಕಾರ ಈ ಭರವಸೆ ನೀಡಿದೆ.
ಆದರೆ ಈ ವಿಷಯ ಕುರಿಂತೆ ಕೆನ್ನಿ ಅವರ ಪಕ್ಷದಿಂದಲೇ ವ್ಯತಿರಿಕ್ತ ಹೇಳಿಕೆಗಳು ಬರುತ್ತಿವೆ. ಕಾನೂನು ಬದ್ಧ ಗರ್ಭಪಾತ ಕುರಿತು ತಂಡವು ಹಲವಾರು ಆಯ್ಕೆಗಳನ್ನು ಮುಂದಿಟ್ಟಿದೆ. ಇವುಗಳಲ್ಲಿ ಕಾಯ್ದೆ ಹಾಗೂ ನಿಬಂಧನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ವರದಿಯನ್ನು ಬಹಿರಂಗಗೊಳಿಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಜೇಮ್ಸ ರೀಲಿ, ವರ್ಷದ ಕೊನೆಯೊಳಗಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರಲ್ಲದೆ ಸಂಸತ್ತಿನಲ್ಲಿ ವರದಿ ಕುರಿತು ಚರ್ಚಿಸಲಾಗುವುದು ಎಂದರು.
ಸರ್ಕಾರದ ನಿರ್ಧಾರದ ಕುರಿತು ಜನವರಿ 8ರಿಂದ 10ರವರೆಗೆ ಜಂಟಿ ಸಮಿತಿ ಸಾರ್ವಜನಿಕವಾಗಿಯೂ ಚರ್ಚೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.