ADVERTISEMENT

ಚೀನಾದಲ್ಲಿ ಗಡ್ಕರಿ ನೇತೃತ್ವದ ನಿಯೋಗ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಬೀಜಿಂಗ್ (ಐಎಎನ್‌ಎಸ್): ಹಲವು ವರ್ಷಗಳಿಂದ ಚೀನಾದೊಂದಿಗಿನ ಭಾರತದ ಬಾಂಧವ್ಯವು ವಿಕಸನ ಗೊಂಡು ಪ್ರೌಢ ಸ್ವರೂಪ ಪಡೆದಿದ್ದು, ವಿಶಿಷ್ಟ ಆಯಾಮ ಪಡೆದುಕೊಂಡಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇಲ್ಲಿ ಹೇಳಿದರು.ಚೀನಾಕ್ಕೆ ಭೇಟಿ ನೀಡುತ್ತಿರುವ ಬಿಜೆಪಿಯ ಮೊದಲ ಅಧ್ಯಕ್ಷರೆಂಬ ಹೆಗ್ಗಳಿಕೆ ಗಡ್ಕರಿ ಅವರದಾಗಿದೆ. ಐದು ದಿನಗಳ ಭೇಟಿಗಾಗಿ ಅವರು ಬುಧವಾರ ಇಲ್ಲಿಗೆ ಆಗಮಿಸಿದರು. ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕರೊಡನೆ ಹಲವು ವಿಷಯಗಳ ಬಗ್ಗೆ ಅವರು ಮಾತುಕತೆ ನಡೆಸಲಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಸಂಪರ್ಕ ಬೆಳೆಸುವ ಗುರಿಯೊಂದಿಗೆ ಅವರು ಈ ಸದ್ಭಾವನೆಯ ಪ್ರವಾಸವನ್ನು ಕೈಗೊಂಡಿದ್ದಾರೆ.

ಗಡ್ಕರಿಯವರು ಪತ್ನಿ ಕಾಂಚನ್ ಮತ್ತು ಬಿಜೆಪಿ ಹಿರಿಯ ನಾಯಕರ ನಿಯೋಗದೊಂದಿಗೆ ಇಲ್ಲಿಗೆ ಬಂದಿದ್ದಾರೆ. ನಿಯೋಗದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ತಾವರ್‌ಚಂದ್ ಗೆಹ್ಲೋಟ್, ವಿಜಯ್ ಗೋಯೆಲ್, ಜಂಟಿ ಸಂಘಟನಾ ಕಾರ್ಯದರ್ಶಿ ಸೌದಾನ್ ಸಿಂಗ್, ಕಾರ್ಯದರ್ಶಿಗಳಾದ ಲಕ್ಷ್ಮಣ್ ಕೋವಾ, ಆರತಿ ಮೆಹ್ರಾ, ವಿದೇಶಾಂಗ ವ್ಯವಹಾರ ಘಟಕದ ಜಂಟಿ ಸಂಚಾಲಕ ವಿಜಯ್ ಜೋಲಿ ಹಾಗೂ ಗಡ್ಕರಿಯವರ ರಾಜಕೀಯ ಮಿತ್ರ ವಿನಯ್ ಸಹಸ್ರಬುದ್ದೆ ಮತ್ತಿತರರು ಇದ್ದಾರೆ.

ನಿಯೋಗವು ಬೀಜಿಂಗ್ ಮಾತ್ರವಲ್ಲದೆ, ಶಾಂಘಾಯ್ ಮತ್ತು ಗುವಾಂಗ್‌ಜಾವ್ ಮುಂತಾದ ನಗರಗಳಿಗೂ ಭೇಟಿ ನೀಡಲಿದೆ. ಚೀನಾ ಕಮ್ಯುನಿಸ್ಟ್ ಪಕ್ಷದ 9 ಹಿರಿಯ ನಾಯಕರಲ್ಲಿ ಒಬ್ಬರಾದ ಲೀ ಚಾಂಗ್ ಚುನ್ ಅವರೊಂದಿಗೂ ಗಡ್ಕರಿ ಸಮಾಲೋಚನೆ ನಡೆಸಲಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಅಂತರರಾಷ್ಟ್ರೀಯ ವಿಭಾಗದ ಮುಖ್ಯಸ್ಥ  ಐಪಿಂಗ್ ಅವರನ್ನೂ ಭೇಟಿ ಮಾಡಲಿದ್ದಾರೆ.  ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವುದನ್ನು ಅಧ್ಯಯನ ಮಾಡಲು ಗುವಾಂಗ್ ಜಾವ್‌ನಲ್ಲಿರುವ ಕಮ್ಯುನಿಸ್ಟ್ ಪಕ್ಷದ ಸಮುದಾಯ ಕೇಂದ್ರಕ್ಕೂ ನಿಯೋಗ ಭೇಟಿ ನೀಡಲಿದೆ.

“ಭಾರತದ ಎಲ್ಲ ರಾಜಕೀಯ ಪಕ್ಷಗಳಲ್ಲೂ ಚೀನಾದೊಂದಿಗೆ ಅತ್ಯಂತ ಸೌಹಾರ್ದ ಮತ್ತು ಸಹಕಾರದ ಬಾಂಧವ್ಯ ಹೊಂದಬೇಕೆಂಬ ಒಮ್ಮತಾಭಿಪ್ರಾಯವಿದೆ. 2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗಡಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ  ಚರ್ಚಿಸಲು ಉಭಯ ರಾಷ್ಟ್ರಗಳ ಪ್ರಧಾನಿಗಳ ವಿಶೇಷ ಪ್ರತಿನಿಧಿಗಳನ್ನು ನಿಯೋಜಿಸುವ ನಿರ್ಣಯ ಕೈಗೊಂಡಿದ್ದರು” ಎಂದು ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.