ಬೀಜಿಂಗ್( ಐಎಎನ್‌ಎಸ್): ನೈರುತ್ಯ ಚೀನಾದ ಚಾಂಗ್‌ಕಿಂಗ್ ಪ್ರಾಂತ್ಯದ ದಜುವಿನಲ್ಲಿರುವ ಸುಮಾರು 800 ವರ್ಷಗಳಷ್ಟು ಹಳೆಯದಾದ ಸಾವಿರ ಕೈಗಳ ‘ಕ್ಸಿಯಾನ್ಸು ಗ್ವಾನ್‌ಯಿನ್’ ಬುದ್ಧನ ಪ್ರತಿಮೆಗೆ ಸತತ 7 ವರ್ಷಗಳ ಪರಿಶ್ರಮದ ಮೂಲಕ ಸುಮಾರು 61.74 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲಾಗಿದೆ.
ಇದೀಗ ಈ ಪ್ರತಿಮೆಯ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು ಪ್ರವಾಸಿಗರಿಗೆ ಮುಕ್ತಗೊಂಡಿದೆ ಎಂದು ಚೀನಾ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಪ್ರತಿಮೆಯೊಂದರ ಜೀರ್ಣೊದ್ಧಾರಕ್ಕೆ 7 ವರ್ಷಗಳಷ್ಟು ಸುದೀರ್ಘ ಸಮಯ ತೆಗೆದುಕೊಂಡಿದ್ದು ಕೂಡ ದಾಖಲೆ ಎನಿಸಿದೆ.
7.7 ಮೀಟರ್ ಎತ್ತರ ಮತ್ತು 12.5 ಮೀಟರ್ ಅಗಲ ಹೊಂದಿರುವ ಈ ಪ್ರತಿಮೆಯ 830 ಕೈಗಳನ್ನು ತಂತ್ರಜ್ಞರು ಸರಿಪಡಿಸಿದ್ದಾರೆ. ಇಡೀ ಪ್ರತಿಮೆಯನ್ನು ತಿದ್ದಿ, ತೀಡಿ ಸ್ವಚ್ಛಗೊಳಿಸಲಾಗಿದ್ದು, ಸಂಪೂರ್ಣ ಸ್ವರ್ಣ ಲೇಪನ ಮಾಡಲಾಗಿದೆ. ಮುಂದಿನ 50 ವರ್ಷಗಳ ಕಾಲ ಪ್ರತಿಮೆ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ ಎನ್ನುತ್ತಾರೆ ಚೀನಾದ ಕಲೆ ಸಂಸ್ಕೃತಿ ಅಕಾಡೆಮಿಯ ಸಂಶೋಧಕ ಚಾನ್ ಚಂಗ್ಫಾ.
ತಾಂಗ್ ರಾಜಮನೆತನದವರು ನಿರ್ಮಿಸಿದ್ದ ಈ ಪ್ರತಿಮೆಯನ್ನು ಯುನೆಸ್ಕೊ, 1999ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.