ADVERTISEMENT

ಚೀನಾ: ಭೂ ಕುಸಿತಕ್ಕೆ 18 ಶಾಲಾ ಮಕ್ಕಳು ಜೀವಂತ ಸಮಾಧಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:55 IST
Last Updated 5 ಅಕ್ಟೋಬರ್ 2012, 5:55 IST

ಬೀಜಿಂಗ್ (ಪಿಟಿಐ): ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಗುರುವಾರ ಉಂಟಾದ ಭಾರಿ ಪ್ರಮಾಣದ ಭೂ ಕುಸಿತಕ್ಕೆ ಪ್ರಾಥಮಿಕ ಶಾಲೆಯೊಂದು ಆಹುತಿಯಾಗಿದ್ದು, ದುರ್ಘಟನೆಯಲ್ಲಿ ಶಾಲೆಯ ಎಲ್ಲ 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿ ಶುಕ್ರವಾರ ತಿಳಿಸಿದರು.
 
ಯುನ್ನಾನ್ ಪ್ರಾಂತ್ಯದ ಜೆನ್ಹೆ ಗ್ರಾಮದಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಶಾಂಘಬ ಪ್ರಾಥಮಿಕ ಶಾಲೆಯ ಎಲ್ಲ 18 ವಿದ್ಯಾರ್ಥಿಗಳು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನ್ಹುವಾ ಹೇಳಿದೆ.

ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಕಾಣೆಯಾಗಿ, ಇನ್ನೊರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳಿಗೆ ತಾತ್ಕಾಲಿಕ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಸಂಭವಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿರುವ ಭದ್ರತಾ ಪಡೆಗಳು, ರಕ್ಷಣಾ ಕಾರ್ಯಾಚರಣೆ ಪಡೆಗಳು ಹಾಗೂ ಸಾರ್ವಜನಿಕರು ರಕ್ಷಣಾ ಕಾರ್ಯ ಕೈಗೊಂಡು ಮಣ್ಣಿನಡಿ ಜಖಂಗೊಂಡ ಶಾಲೆಯ ಕಟ್ಟಡದ ಒಳಗೆ ಸಿಲುಕಿದ್ದ ಮಕ್ಕಳ ಮೃತದೇಹಗಳನ್ನು ಹೊರತೆಗೆಯಲು ಶ್ರಮಿಸಿದರು.
 
ಕಳೆದ ಸೆಪ್ಟೆಂಬರ್‌ನಲ್ಲಿ ಉಂಟಾದ ಭೂಕಂಪನಗಳಿಂದ ಹಾನಿಗೊಂಡಿದ್ದ ಇದೇ ಶಾಲೆಯ ಮೂರು ಕಟ್ಟಡಗಳನ್ನು ನಂತರದಲ್ಲಿ ಕೆಡವಿ ಹಾಕಲಾಗಿತ್ತು. ಆದ್ದರಿಂದ ಅವುಗಳಲ್ಲಿ ಓದುತ್ತಿದ್ದ 30 ವಿದ್ಯಾರ್ಥಿಗಳಿಗೆ ಸಮೀಪದ ಥೈಯಾಂಟೌ ಶಾಲೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.
 
ಸೆಪ್ಟೆಂಬರ್‌ನಲ್ಲಿ ಯಿಲಿಯಾಂಗ್‌ನಲ್ಲಿ ಉಂಟಾದ ಭೂಕಂಪನಗಳಿಂದಾಗಿ 81 ಜನರು ಮೃತಪಟ್ಟು, 800ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.