ADVERTISEMENT

ಜರ್ದಾರಿಯಿಂದ ಮಲಾಲಾ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 14:17 IST
Last Updated 9 ಡಿಸೆಂಬರ್ 2012, 14:17 IST

ಲಂಡನ್ (ಐಎಎನ್‌ಎಸ್): ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಪ್ರತಿಪಾದಿಸಿ ತಾಲಿಬಾನಿ ಉಗ್ರರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು, ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಶಾಲಾ ಬಾಲಕಿ ಮಲಾಲಾ ಯೂಸುಫ್‌ಝಾಯಿ ಅವರನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಇಲ್ಲಿನ ಕ್ವಿನ್ ಎಲೆಜಬೆತ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಲಾಲಾ ಅವರನ್ನು ಭೇಟಿ ಮಾಡಿದ ಜರ್ದಾರಿ ಅವರು, `ಆದಷ್ಟು ಬೇಗ ಗುಣಮುಖರಾಗಿ' ಎಂದು ಆರೈಸಿದರು. ಈ ಸಂದರ್ಭದಲ್ಲಿ ಜರ್ದಾರಿ ಅವರ ಮಗಳು ಆಸೀಫಾ ಭುಟ್ಟೊ ಉಪಸ್ಥಿತರಿದ್ದರು.

ಆಸ್ಪತ್ರೆಯ ಹಿರಿಯ ವ್ಯೆದ್ಯರು ಅಧ್ಯಕ್ಷರಿಗೆ ಮಲಾಲಾ ಆರೋಗ್ಯ ಸ್ಥಿತಿಯ ಬಗ್ಗೆ ಸಂಕ್ಷಿಪ್ತವಾಗಿ ಅಧ್ಯಕ್ಷರಿಗೆ ವಿವರಿಸಿದರು.

`ಪಾಕಿಸ್ತಾನದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಪ್ರತಿಪಾದಿಸುತ್ತಿರುವ ಮಲಾಲಾ ಹಾಗೂ ಆಕೆಯ ಸ್ನೇಹಿತೆಯರನ್ನು ಇಡೀ ಪಾಕಿಸ್ತಾನವು ಗೌರವಿಸುತ್ತಿದೆ. ಪಾಕಿಸ್ತಾನ ಸರ್ಕಾರವು ಎಲ್ಲಾ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ನಿರ್ಧರಿಸಿದೆ' ಎಂದು ಅವರು ಇದೇ ಸಂದರ್ಭದಲ್ಲಿ ಅಧ್ಯಕ್ಷರು ಹೇಳಿದರು.

`ಉಗ್ರರನ್ನು ಮಟ್ಟ ಹಾಕಲು ನಮ್ಮ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಈ ಘಟನೆ ನಡೆಯಬಾರದಾಗಿತ್ತು. ಮಲಾಲಾ ಶೀಘ್ರ ಗುಣಮುಖವಾಗಿ ಸ್ವದೇಶಕ್ಕೆ ಹಿಂದಿರುಗಲಿ. ಪಾಕಿಸ್ತಾನ ದೇಶದ ಜನರೊಂದೇ ಅಲ್ಲ ಇಡೀ ವಿಶ್ವದ ಜನರು ಆಕೆಯು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ' ಎಂದರು.

ಮಲಾಲಾಗೆ ಶೀಘ್ರವಾಗಿ ಸ್ಪಂಧಿಸಿ, ಆಕೆಯ ಆರೋಗ್ಯವನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ವ್ಯೆದ್ಯರಿಗೆ ಹಾಗೂ ಸಿಬ್ಬಂಧಿಗಳಿಗೆ ಜರ್ದಾರಿ ಇದೇ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು.

`ನನ್ನ ಚಿಕಿತ್ಸೆಗೆ ನೆರವಾಗಿರುವ ಸರ್ಕಾರಕ್ಕೆ ಹಾಗೂ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಎಲ್ಲರಿಗೂ ನಾನು ಹಾಗೂ ನನ್ನ ಕುಟುಂಬವು ಅಭಾರಿಯಾಗಿದೆ' ಎಂದು ಮಲಾಲಾ ತಿಳಿಸಿದರು.

`ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಪ್ರತಿಪಾದಿಸಲು ನನಗೆ ಜರ್ದಾರಿ ಅವರ ಪತ್ನಿ ಮಾಜಿ ಅಧ್ಯಕ್ಷೆ ದಿ. ಬೆನಜಿರ ಭುಟ್ಟೊ ಅವರೇ ಮಾಧರಿ ಎಂದು ಮಲಾಲಾ ತನ್ನ ನಿರ್ಧಾರದ ಹಿಂದಿನ ಬಲವನ್ನು ಹೇಳಿಕೊಂಡರು.

ಜರ್ದಾರಿ ಅವರ ಭೇಟಿಯ ಸಮಯದಲ್ಲಿ ಮಲಾಲಾ ತಂದೆ ಹಾಗೂ ಆಕೆಯ ಸಹೋದರ ಉಪಸ್ಥಿತರಿದ್ದರು.

ಮಲಾಲಾ ಉಗ್ರರ ಗುಂಡೇಟಿಗೆ ಬಲಿಯಾಗಿ ಚಿಕಿತ್ಸೆಗೆ ಇಲ್ಲಿಗೆ ದಾಖಲಾದ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. 

ಮಲಾಲಾ ಭೇಟಿಯ ಸಮಯದಲ್ಲಿ ಜರ್ದಾರಿ ಅವರ ಮಗಳು ಆಸೀಫಾ ಭುಟ್ಟೊ ಮಲಾಲಾಗೆ ಶಾಲು ಹಾಕಿ ಗೌರವಿಸಿ, ಶೀಘ್ರ ಗುಣಮುಖರಾಗಿ ಎಂದು ಆರೈಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.