ADVERTISEMENT

ಜಹೀರುಲ್ ಐಎಸ್‌ಐ ನೂತನ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಲೆಫ್ಟಿನೆಂಟ್ ಜನರಲ್ ಜಹೀರುಲ್ ಇಸ್ಲಾಂ ಅವರನ್ನು ಬೇಹುಗಾರಿಕಾ ದಳ ಐಎಸ್‌ಐ ದ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ.

ಪ್ರಸ್ತುತ ಐಎಸ್‌ಐ ಮುಖ್ಯಸ್ಥರಾಗಿರುವ ಲೆ.ಜ. ಅಹಮ್ಮದ್ ಶುಜಾ ಪಾಷಾ ಅವರ ಅಧಿಕಾರಾವಧಿ ಮಾರ್ಚ್ 18ರಂದು ಕೊನೆಗೊಳ್ಳಲಿದ್ದು, ನಂತರ ಇಸ್ಲಾಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇಸ್ಲಾಂ ನೇಮಕದೊಂದಿಗೆ ಪಾಷಾ ಅವರಿಗೆ 3ನೇ ಬಾರಿಗೆ ಅಧಿಕಾರ ವಿಸ್ತರಿಸಬಹುದೆಂಬ ಶಂಕೆಗೆ ತೆರೆಬಿದ್ದಿದೆ.
ಇಸ್ಲಾಂ ಅವರಿಗೆ 2008-2010ರ ಅವಧಿಯಲ್ಲಿ ಐಎಸ್‌ಐ  ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. 2014ರ ಅಕ್ಟೋಬರ್‌ವರೆಗೆ ಸೇವಾವಧಿ ಹೊಂದಿರುವ ಇಸ್ಲಾಂ ಮೂಲತಃ ಇಲ್ಲಿನ ಪಂಜಾಬ್ ಪ್ರಾಂತ್ಯದ ಸೇನಾ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಇಸ್ಲಾಂ ಅವರ ಸೋದರ ಸಂಬಂಧಿಯಾದ ಷಾ ನವಾಜ್ ಖಾನ್ ಅವರು,  ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸುಭಾಷ್‌ಚಂದ್ರ ಬೋಸ್ ಅವರು ಕಟ್ಟಿದ್ದ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಪ್ರಮುಖರಲ್ಲಿ ಒಬ್ಬರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.