ADVERTISEMENT

ಜಾಫ್ನಾದಲ್ಲಿ ಶೇ 60ರಷ್ಟು ಮತದಾನ

25 ವರ್ಷಗಳ ನಂತರ ಐತಿಹಾಸಿಕ ಚುನಾವಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST
ಜಾಫ್ನಾದಲ್ಲಿ 25 ವರ್ಷಗಳ ಬಳಿಕ ಇದೇ ಮೊದಲ ಬಾರಿ ಶನಿವಾರ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಮತಗಟ್ಟೆಯೊಂದರ ಮುಂದೆ ಸರದಿಯಲ್ಲಿ ನಿಂತ ಶ್ರೀಲಂಕಾದ ತಮಿಳು ಭಾಷಿಕರು 	- ಎಪಿ ಚಿತ್ರ
ಜಾಫ್ನಾದಲ್ಲಿ 25 ವರ್ಷಗಳ ಬಳಿಕ ಇದೇ ಮೊದಲ ಬಾರಿ ಶನಿವಾರ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಮತಗಟ್ಟೆಯೊಂದರ ಮುಂದೆ ಸರದಿಯಲ್ಲಿ ನಿಂತ ಶ್ರೀಲಂಕಾದ ತಮಿಳು ಭಾಷಿಕರು - ಎಪಿ ಚಿತ್ರ   

ಕೊಲಂಬೊ (ಪಿಟಿಐ): ಶ್ರೀಲಂಕಾದ ತಮಿಳು ಭಾಷಿಕರ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿ ಜಾಫ್ನಾದಲ್ಲಿ 25 ವರ್ಷಗಳ ಬಳಿಕ ಇದೇ ಮೊದಲ ಬಾರಿ ಶನಿವಾರ ಐತಿಹಾಸಿಕ ಚುನಾವಣೆ ನಡೆದಿದ್ದು, ಶೇ 60ರಷ್ಟು ಮತದಾನವಾಗಿದೆ.

ಕಾಲು ಶತಮಾನ ಎಲ್‌ಟಿಟಿಇ ಹಿಡಿ­ತದಲ್ಲಿದ್ದ ಉತ್ತರ ಪ್ರಾಂತ್ಯದ ನಾಗ­ಕ­ರಿಕರು ತಮ್ಮದೇ ಆದ ಪ್ರಾಂತೀಯ ಸರ್ಕಾರವನ್ನು ಆಯ್ಕೆ ಮಾಡಲು ಹಕ್ಕು ಚಲಾಯಿಸಿದರು.

ಮಧ್ಯಾಹ್ನದ ಹೊತ್ತಿಗೆ  ಐದು ಜಿಲ್ಲೆಗಳ ಅರ್ಧಕ್ಕಿಂತಲೂ ಹೆಚ್ಚಿನ ಜನರು ಮತ ಚಲಾಯಿಸಿದರು. 850 ಮತ ಗಟ್ಟೆಗಳಲ್ಲಿ ಬೆಳಿಗ್ಗೆ ಏಳು ಗಂಟೆಗೆ ಬಿಗಿ ಭದ್ರತೆಯಲ್ಲಿ ಮತದಾನ ಶುರುವಾ­ಯಿತು.

ತಮಿಳರಿಗೆ ಮತ ಹಾಕಬೇಡಿ:  ಸೇನಾ ಸಮವಸ್ತ್ರದಲ್ಲಿದ್ದ ಪುರುಷರು ಕೈಯಲ್ಲಿ ಬಂದೂಕು ಹಿಡಿದುಕೊಂಡು ಉತ್ತರ ಪ್ರಾಂತ್ಯದಲ್ಲಿನ ಮನೆ ಮನೆಗೆ ಭೇಟಿ ನೀಡಿ, ‘ ತಮಿಳು ರಾಷ್ಟ್ರೀಯ ಮೈತ್ರಿ ಕೂಟಕ್ಕೆ (ಟಿಎನ್‌ಎ)  ಮತ ಹಾಕಬೇಡಿ’ ಎಂದು ಹೇಳಿದರು. ಸುಮಾರು 906 ಅಭ್ಯರ್ಥಿಗಳು  ಕಣ­ದಲ್ಲಿದ್ದಾರೆ. ಟಿಎನ್‌ಎ  ಜಯಗಳಿಸುವ ನಿರೀಕ್ಷೆ ಇದೆ.

ಭಾರತದ ಮತಪೆಟ್ಟಿಗೆ
ಇದೇ ಮೊದಲ ಬಾರಿ ಶ್ರೀಲಂಕಾದ ಚುನಾವಣೆಯಲ್ಲಿ ಭಾರತದಿಂದ ಆಮದು ಮಾಡಿಕೊಂಡಿರುವ ಪಾರದರ್ಶಕ ಮತಪೆಟ್ಟಿಗೆಗಳನ್ನು ಬಳಸಿಕೊಳ್ಳಲಾಗಿದೆ.
ಈವರೆಗೆ  ಮರದಿಂದ ಮಾಡಿದ ಮತಪೆಟ್ಟಿಗೆ ಬಳಸಲಾಗುತ್ತಿತ್ತು.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಇವುಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿರುವುದಾಗಿ ಶ್ರೀಲಂಕಾ ಚುನಾವಣಾ ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.