ADVERTISEMENT

ಟೇಬಲ್ ಟೆನಿಸ್: ಭಾರತ ತಂಡಕ್ಕೆ ನಾಲ್ಕು ಚಿನ್ನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಬ್ರಟಿಸ್ಲಾವಾ, ಸ್ಲೊವಾಕಿಯಾ (ಐಎಎನ್‌ಎಸ್): ಭಾರತದ ಸ್ಪರ್ಧಿಗಳು ಇಲ್ಲಿ ನಡೆದ   ಐಟಿಟಿಎಫ್ ಓಪನ್ ಟೇಬಲ್ ಟೆನಿಸ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದು, 4 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು.
ವಿದೇಶಿ ನೆಲದಲ್ಲಿ ನಡೆದ ಟೂರ್ನಿಯೊಂದರಲ್ಲಿ ಭಾರತ ತೋರಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ.

ಸುತೀರ್ಥಾ ಮುಖರ್ಜಿ, ರೀತ್ ಟೆನಿಸನ್ ಹಾಗೂ ಮಾನಿಕಾ ಬಾತ್ರ ಅವರನ್ನೊಳಗೊಂಡ ಬಾಲಕಿಯರ ತಂಡ ಬಂಗಾರ ಗೆದ್ದುಕೊಂಡರೆ, ಅಭಿಷೇಕ್ ಯಾದವ್, ಸುಧಾನ್ಶು ಗ್ರೋವರ್ ಹಾಗೂ ರಾಜಾ ಅವರನ್ನೊಳಗೊಂಡ ಬಾಲಕರ ತಂಡ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದೆ.

ಸುತೀರ್ಥಾ ಬಾಲಕಿಯರ ಸಿಂಗಲ್ಸ್, ಬಾಲಕಿಯರ ಡಬಲ್ಸ್ (ಮಾನಿಕಾ ಜೊತೆ) ಹಾಗೂ ಬಾಲಕಿಯರ ತಂಡ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದರು. ಬಾಲಕರ ಡಬಲ್ಸ್‌ನಲ್ಲೂ ಭಾರತ ಚಿನ್ನ ಗೆದ್ದುಕೊಂಡಿತು.

ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸುತೀರ್ಥಾ 3-11, 11-6, 11-6, 11-8, 11-9 ರಲ್ಲಿ ಮಾನಿಕಾ ಬಾತ್ರ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸುತೀರ್ಥಾ -ಬಾತ್ರ ಜೋಡಿ  7-11, 11-6, 11-6, 6-11, 11-8 ರಲ್ಲಿ ಫ್ರಾನ್ಸ್‌ನ ಪೌಲಿನ್ ಚಾಸೆಲಿನ್ ಹಾಗೂ ಆಡ್ರೆ ಜರಿಫ್ ಅವರನ್ನು ಮಣಿಸಿತು.  ಬಾಲಕರ ಡಬಲ್ಸ್ ವಿಭಾಗದಲ್ಲಿ ಸುದಾನ್ಶು ಹಾಗೂ ಅಭಿಷೇಕ್ 11-9,11-6,11-13, 8-11, 11-7 ರಲ್ಲಿ ಬ್ರೆಜಿಲ್‌ನ ವಿಟೊರ್ ಇಶಿಯ್ ಮತ್ತು ಮಸಾವೊ ಕೊಹಸ್ತು ಅವರನ್ನು ಸೋಲಿಸಿ ಸ್ವರ್ಣ ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.