ADVERTISEMENT

ತಮಿಳು ಪ್ರದೇಶಕ್ಕೆ ನೆರವು: ಕೃಷ್ಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಕಿಲಿನೊಚ್ಚಿ (ಪಿಟಿಐ): ಒಂದು ಕಾಲದಲ್ಲಿ ಎಲ್‌ಟಿಟಿಇಯ ಸುಭದ್ರ ನೆಲೆಯಾಗಿದ್ದ ಈ ಪಟ್ಟಣಕ್ಕೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಬುಧವಾರ ಭೇಟಿ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತದ ನಾಯಕರು ಈ ಪ್ರದೇಶಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

ಶ್ರೀಲಂಕಾದ ಉತ್ತರ ಭಾಗದಲ್ಲಿ, ಸೇನೆ ಮತ್ತು ಎಲ್‌ಟಿಟಿಇ ನಡುವೆ ನಡೆದ ಯುದ್ಧದಿಂದ ತೊಂದರೆಗೊಳಗಾಗಿರುವ ತಮಿಳರ ಜೀವನಮಟ್ಟ ಸುಧಾರಣೆಗೆ ಅಗತ್ಯವಾದ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಮೂರು ದಶಕಗಳ ಕಾಲ ನಡೆದ ಜನಾಂಗೀಯ ಕಲಹದ ಕುರುಹುಗಳನ್ನು ಇನ್ನೂ ಉಳಿಸಿಕೊಂಡಿರುವ ಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಬಂದ ಕೃಷ್ಣ, 1.5 ಕೋಟಿ ರೂಪಾಯಿ ಮೊತ್ತದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಿದರು. ಇನ್‌ಕ್ಯುಬೇಟರ್, ಕಾರ್ಡಿಯಾಕ್ ಬೆಡ್, ಪ್ರಸೂತಿ ಹಾಸಿಗೆಯಂತಹ ಸಲಕರಣೆಗಳು ಇದರಲ್ಲಿ ಸೇರಿವೆ. ಕಿಲಿನೊಚ್ಚಿ ಮಾತ್ರವಲ್ಲದೆ, ವವೂನಿಯ ಮತ್ತು ಮುಲ್ಲತೀವು ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯ ನಿರಾಶ್ರಿತ ತಮಿಳರು ಈ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.

ಭಾರತ ಸರ್ಕಾರದ ನೆರವಿನಿಂದ ನವೀಕರಣಗೊಂಡ 79 ಶಾಲೆಗಳನ್ನೂ ಕೃಷ್ಣ ಜಿಲ್ಲಾಡಳಿತದ ವಶಕ್ಕೆ ನೀಡಿದರು. ಯುದ್ಧದ ಸಂದರ್ಭದಲ್ಲಿ ಈ ಶಾಲೆಗಳು ತೀವ್ರವಾಗಿ ಹಾನಿಗೊಂಡಿದ್ದವು.

ಸಚಿವರೊಂದಿಗೆ ಶ್ರೀಲಂಕಾದ ಅವರ ಸಹವರ್ತಿ ಜಿ.ಎಲ್.ಪೆರಿಸ್, ಆರ್ಥಿಕ ಅಭಿವೃದ್ಧಿ ಸಚಿವ ಬಾಸಿಲ್ ರಾಜಪಕ್ಸ, ಸಣ್ಣ ಕೈಗಾರಿಕಾ ಸಚಿವ ಹಾಗೂ ತಮಿಳು ಮುಖಂಡ ಡಗ್ಲಾಸ್ ದೇವಾನಂದ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.