ADVERTISEMENT

ತಾಪಮಾನ ಏರಿಕೆಯಿಂದ ಪೆಂಗ್ವಿನ್‌ಗಳಿಗೆ ಅಪಾಯ

ಪಿಟಿಐ
Published 27 ಫೆಬ್ರುವರಿ 2018, 19:58 IST
Last Updated 27 ಫೆಬ್ರುವರಿ 2018, 19:58 IST
ತಾಪಮಾನ ಏರಿಕೆಯಿಂದ ಪೆಂಗ್ವಿನ್‌ಗಳಿಗೆ ಅಪಾಯ
ತಾಪಮಾನ ಏರಿಕೆಯಿಂದ ಪೆಂಗ್ವಿನ್‌ಗಳಿಗೆ ಅಪಾಯ   

ಲಂಡನ್‌: ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಏರಿಕೆ ಇದೇ ರೀತಿ ಮುಂದುವರಿದರೆ ಕಿಂಗ್‌ ಪೆಂಗ್ವಿನ್‌ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

‘ಪೆಂಗ್ವಿನ್‌ಗಳು ಅಂಟಾರ್ಕ್ಟಿಕಾ ಸರೋವರದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲಿನ ಕೆಲವೇ ಕೆಲವು ನಡುಗಡ್ಡೆಗಳು ಮಾತ್ರ ಪೆಂಗ್ವಿನ್‌ಗಳ ವಾಸಕ್ಕೆ ಯೋಗ್ಯವಾಗಿವೆ. ಎಲ್ಲ ನಡುಗಡ್ಡೆಗಳೂ ಮೊಟ್ಟೆ ಇಟ್ಟು ಮರಿ ಮಾಡಲು ಸೂಕ್ತವಾಗಿರುವುದಿಲ್ಲ. ಪೆಂಗ್ವಿನ್‌ಗಳು ಆಹಾರಕ್ಕಾಗಿ ಅಂಟಾರ್ಕ್ಟಿಕಾದ ಧ್ರುವ ಪ್ರದೇಶದ ನಿರ್ದಿಷ್ಟ ಭಾಗವನ್ನು (ಪೋಲಾರ್ ಫ್ರಂಟ್) ಅವಲಂಬಿಸಿವೆ. ಈ ಭಾಗದಲ್ಲಿ ಕಡಿಮೆ ಜಾಗದಲ್ಲಿ ಸಾಕಷ್ಟು ಮೀನುಗಳು ಸಿಗುತ್ತವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಪ್ರದೇಶ ದಕ್ಷಿಣಕ್ಕೆ ಸರಿಯುತ್ತಿದೆ. ನಡುಗಡ್ಡೆಗಳು ಕರಗುತ್ತಿವೆ’ ಎಂದು ಫ್ರಾನ್ಸ್‌ನ ಸ್ಟ್ರ್ಯಾಸ್‌ಬರ್ಗ್‌ ವಿಶ್ವವಿದ್ಯಾಲಯದ ರಾಬಿನ್ ಕ್ರಿಸ್ಟೊಫರಿ ತಿಳಿಸಿದ್ದಾರೆ.

‘ಒಂದು ಭಾಗದ ಸರಿಯುವಿಕೆಯು ಪೆಂಗ್ವಿನ್‌ಗಳು ಈಗ ವಾಸಿಸುತ್ತಿರುವ ಪ್ರದೇಶದಿಂದ ಸಾಕಷ್ಟು ದೂರದವರೆಗೂ ಆಗುತ್ತಿದೆ. ಹಾಗಾಗಿ ಪೋಷಕ ಪೆಂಗ್ವಿನ್‌ಗಳು ಆಹಾರ ಹೊತ್ತು ತಮ್ಮ ಮರಿಗಳು ಇರುವಲ್ಲಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದರಿಂದ ಮರಿ ಪೆಂಗ್ವಿನ್‌ಗಳು ಆಹಾರವಿಲ್ಲದೆ ಹೆಚ್ಚು ಸಮಯ ಕಾಯಬೇಕು. ಹಸಿವಿನಿಂದ ಬಳಲಿ ಅವು ಸಾಯಬಹುದು. ಕ್ರಮೇಣ ಕಿಂಗ್‌ ಪೆಂಗ್ವಿನ್‌ ಸಂತತಿಯ ಅವನತಿಗೂ ಕಾರಣವಾಗಬಹುದು’ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಸಂಶೋಧಕರು ಕಳೆದ 50 ಸಾವಿರ ವರ್ಷಗಳಲ್ಲಿ ಇದ್ದ ವಾತಾವರಣ, ಹವಾಮಾನ ಬದಲಾವಣೆ, ಕಿಂಗ್‌ ಪೆಂಗ್ವಿನ್‌ಗಳಲ್ಲಿ ಆದ ಮಾರ್ಪಾಡುಗಳನ್ನು ಪುನರ್‌ರಚಿಸಿ ಈ ಅಧ್ಯಯನ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಮಾನವ ಚಟುವಟಿಕೆಗಳು ಮಾರ್ಪಡಿಸಲಾಗದ ಬದಲಾವಣೆಗಳನ್ನು ಉಂಟು ಮಾಡುತ್ತಿವೆ. ಅಂಟಾರ್ಕ್ಟಿಕಾದಲ್ಲಿ ಈಗ ಮೀನುಗಾರಿಕೆ ಒಂದು ಉದ್ಯಮವಾಗಿದ್ದು, ಪೆಂಗ್ವಿನ್‌ಗಳು ತಮ್ಮ ಆಹಾರಕ್ಕಾಗಿ ಹೋರಾಡಬೇಕಾಗಿದೆ. ಈ ಹಿಂದಿನಂತೆ ಪೆಂಗ್ವಿನ್‌ಗಳು ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆಯೇ ಎಂಬುದನ್ನು ಕಾದು ನೋಡುತ್ತೇವೆ ಎಂದು ಸಂಶೋಧನಾ ತಂಡದ ಸೆಲಿನ್ ಲೆ ಬೊಹೆಕ್‌ ತಿಳಿಸಿದ್ದಾರೆ.

‘ಜರ್ನಲ್ ನೇಚರ್’ ನಿಯತಕಾಲಿಕದಲ್ಲಿ ಈ ಸಂಶೋಧನಾ ಲೇಖನ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.