ADVERTISEMENT

ತಾಲಿಬಾನ್‌ ಬಂಡುಕೋರ ಘನಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಇಸ್ಲಾಮಾಬಾದ್‌ (ಪಿಟಿಐ): ಪಾಕಿ­ಸ್ತಾನದ ಭದ್ರತಾ ಸಂಸ್ಥೆ ವಶದಲ್ಲಿದ್ದ ಆಫ್ಘಾನಿಸ್ತಾನದ ತಾಲಿಬಾನ್‌ ಮಾಜಿ ಉಪ ಮುಖ್ಯಸ್ಥ ಮುಲ್ಲಾ ಅಬ್ದುಲ್‌ ಘನಿ ಬರದಾರ್‌ನನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಸಂಘರ್ಷ ಪೀಡಿತ ದೇಶದಲ್ಲಿ ಶಾಂತಿ ಮರು ಸ್ಥಾಪಿಸುವ ಪ್ರಯತ್ನವಾಗಿ ಈತನನ್ನು ಬಿಡುಗಡೆ ಮಾಡುವಂತೆ ಆಫ್ಘನ್‌್ ಅಧ್ಯಕ್ಷ ಹಮೀದ್‌ ಕರ್ಜೈ ಅವರು ಬಹುದಿನಗಳಿಂದಲೂ ಒತ್ತಾ­ಯಿಸುತ್ತ ಬಂದಿದ್ದರು. 

ಇತರ ಕೈದಿಗಳಂತೆಯೇ  ಘನಿಯನ್ನು ಯಾವುದೇ ರಾಷ್ಟ್ರಗಳಿಗೆ ಹಸ್ತಾಂತರಿ­ಸು­ವುದಿಲ್ಲ. ಆದರೆ ಆತ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿರ­ಬಹುದು.  ‘ಈತನಿಗೆ ಭದ್ರತೆ ನೀಡ­ಲಾ­ಗು­ತ್ತದೆ. ಯಾರನ್ನು ಬೇಕಾದರೂ ಭೇಟಿ ಮಾಡಲು ಅವಕಾಶ ಕೊಡ­ಲಾ­­ಗುತ್ತದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಮತ್ತು ಅಮೆರಿಕ ಬೇಹುಗಾರಿಕೆ ಸಂಸ್ಥೆಗಳು 2010ರಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕರಾಚಿಯಲ್ಲಿ ಈತನನ್ನು ಬಂಧಿಸಲಾ­ಗಿತ್ತು.  ಕಳೆದ ವರ್ಷದಿಂದ ಪಾಕಿಸ್ತಾನ ಬಿಡು­ಗಡೆ ಮಾಡಿರುವ 33 ತಾಲಿ ಬಾನ್‌ ಕೈದಿಗಳಲ್ಲಿ ಘನಿ ಪ್ರಭಾವಿ ಬಂಡುಕೋರ.
ಮುಲ್ಲಾ ಮೊಹಮ್ಮದ್‌ ಓಮರ್‌ ಬಳಿಕ ಘನಿಯನ್ನು ಪ್ರಭಾವಿ ನಾಯಕ ಎಂದು ಪರಿಗಣಿಸಲಾಗಿತ್ತು.

1996ರಲ್ಲಿ ಅಧಿಕಾರಕ್ಕೆ ಬಂದಿದ್ದ ತಾಲಿಬಾನ್‌ ನೇತೃತ್ವದ ಸರ್ಕಾರದಲ್ಲಿ ಘನಿ ಉಪ ರಕ್ಷಣಾ ಸಚಿವನಾಗಿದ್ದ.  2001ರಲ್ಲಿ ಅಮೆರಿಕ ನೇತೃತ್ವದ ಪಡೆಗಳು ತಾಲಿಬಾನ್‌ ಸರ್ಕಾರವನ್ನು ಉರುಳಿಸಿದ ಬಳಿಕ ಪಾಕಿಸ್ತಾನಕ್ಕೆ ನುಸುಳಿದ ನೂರಾರು ಬಂಡುಕೋರ­ರಲ್ಲಿ ಈತನೂ ಒಬ್ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.