ADVERTISEMENT

ತಾಲಿಬಾನ್ ಉಗ್ರರ ಕಣ್ಮರೆ: ಪಾಕ್‌ಗೆ ಅಮೆರಿಕ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 11:30 IST
Last Updated 31 ಡಿಸೆಂಬರ್ 2010, 11:30 IST

ವಾಷಿಂಗ್ಟನ್, (ಐಎಎನ್‌ಎಸ್): ಪಾಕಿಸ್ತಾನದ ಪೊಲೀಸರು ಮತ್ತು ಭದ್ರತಾ ಪಡೆಗಳ ವಶದಲ್ಲಿದ್ದ ಸಾವಿರಾರು ಮಂದಿ ತಾಲಿಬಾನ್ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಕಾಣೆಯಾಗಿದ್ದಾರೆ ಎಂಬ ವರದಿಯನ್ನು ಉಲ್ಲೇಖಿಸಿರುವ ಅಮೆರಿಕ, ಈ ಕುರಿತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಅಮೆರಿಕದ ವಿದೇಶಾಂಗ ಇಲಾಖೆ ಕಾಂಗ್ರೆಸ್‌ಗೆ ಕಳೆದ ತಿಂಗಳು ಸಲ್ಲಿಸಿದ ವರದಿಯಲ್ಲಿ ಪಾಕಿಸ್ತಾನಕ್ಕೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

‘ಭಯೋತ್ಪಾದನೆ ವಿರುದ್ಧದ ಯುದ್ಧ’ ಎಂಬ ನೆಪದಲ್ಲಿ ಪಾಕಿಸ್ತಾನದ ಪೊಲೀಸರು ಬಲೂಚಿಸ್ತಾನ್ ಪ್ರಜೆಗಳನ್ನು ಬಂಧಿಸಿರಬಹುದು ಎಂದು ಅಮೆರಿಕದ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ ಎಂದಿರುವ ಪತ್ರಿಕೆ, ಕಾಣೆಯಾದವರಲ್ಲಿ ಗೆರಿಲ್ಲಾಗಳು ಮತ್ತು ನಾಗರಿಕರು ಸೇರಿದ್ದಾರೆ ಎಂದು ತಿಳಿಸಿದೆ.

ಪಾಕಿಸ್ತಾನಿ ಮಿಲಿಟರಿ ಪಡೆಗಳು ತಾಲಿಬಾನ್‌ನ ಶಸ್ತ್ರರಹಿತ ಉಗ್ರರನ್ನು ವಿಚಾರಣೆ ನಡೆಸುವ ಬದಲು ಹತ್ಯೆಗೈದಿರಬಹುದು ಎಂಬುದರ ಬಗ್ಗೆಯೂ ಅಮೆರಿಕ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಸ್ವಲ್ಪಮಟ್ಟಿನ ಕಾರ್ಯವನ್ನು ಮಾತ್ರ ಮಾಡಿದೆಯಲ್ಲದೆ ಈ ಕುರಿತು ಸರ್ಕಾರ ಸವಾಲುಗಳನ್ನು ಎದುರಿಸುತ್ತಲೇ ಇದೆ. ಜೊತೆಗೆ ಪಾಕಿಸ್ತಾನದ ಭದ್ರತಾ ಪಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ವರದಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.