ADVERTISEMENT

ತಾಲಿಬಾನ್ ವಿರುದ್ಧ ದನಿ: ಬಾಲೆಗೆ ಗುಂಡು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ನಿಷೇಧಿತ ತಾಲಿಬಾನಿ ಉಗ್ರರ ವಿರುದ್ಧ ದನಿ ಎತ್ತಿ ಗುಂಡಿನ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹದಿನಾಲ್ಕು ವರ್ಷದ ಬಾಲಕಿ ಮಲಾಲ ಯೂಸಫ್‌ಝೈಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಕೆಯ ದೇಹದಲ್ಲಿದ್ದ ಗುಂಡನ್ನು ಹೊರ ತೆಗೆಯಲಾಗಿದೆ.

ಪೆಶಾವರದಲ್ಲಿ ಮಾತನಾಡಿದ ಆಕೆಯ ಚಿಕ್ಕಪ್ಪ ಅಹ್ಮದ್ ಷಾ, `ಗಾಯಗೊಂಡ ಮಲಾಲಳನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಜಾನೆಯ ಎರಡು ಗಂಟೆಯಿಂದ ಬೆಳಗಿನ ಐದು ಗಂಟೆ ವರೆಗೆ ತಜ್ಞ ವೈದ್ಯ ಡಾ. ಮುಮ್ತಾಜ್ ಖಾನ್ ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿ, ತಲೆಯ ಮೂಲಕ ಬೆನ್ನುಹುರಿಗೆ ಹೊಕ್ಕಿದ್ದ ಗುಂಡನ್ನು ಯಶಸ್ವಿಯಾಗಿ ಹೊರ ತೆಗೆದು ಆಕೆಯ ಜೀವ ಉಳಿಸಿದ್ದಾರೆ~ ಎಂದರು.

2008ರಲ್ಲಿ ಪಾಕ್‌ನ ಮೊದಲ ಯುವ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮಲಾಲಗೆ ನೀಡಲಾಗಿತ್ತು. ಸ್ವಾತ್ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವಿರುದ್ಧ ತಾಲಿಬಾನಿಗಳು ಹೊರಡಿಸಿದ್ದ ಪತ್ವಾ ವಿರುದ್ಧ ಬಿಬಿಸಿಯ ಉರ್ದು ಬ್ಲಾಗ್‌ನಲ್ಲಿ ಗುಲ್ ಮಕಾಯ್ ಎಂಬ ಅನಾಮಧೇಯ ಹೆಸರಿನಲ್ಲಿ ಬರೆಯುತ್ತಿದ್ದಳು.

ಈ ಮೂಲಕ ತಾಲಿಬಾನಿಗಳ ವಿರುದ್ಧ ದನಿ ಎತ್ತಿದ್ದಳು. ಇದರಿಂದ ಕೆರಳಿದ ಇಬ್ಬರು ಶಂಕಿತ ಉಗ್ರರು ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವ ವೇಳೆ ಮಲಾಲ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹೆಚ್ಚಿನ ಚಿಕಿತ್ಸೆ ವಿದೇಶಕ್ಕೆ ಕರೆದೊಯ್ಯಲು ಅನುಕೂಲವಾಗುವಂತೆ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಒಂದು ವಿಶೇಷ ವಿಮಾನವನ್ನು ಕಾಯ್ದಿರಿಸಿದ್ದು, ಅದರಲ್ಲಿ ಅತ್ಯಾಧುನಿಕ ಆಂಬ್ಯುಲೆನ್ಸ್ ವ್ಯವಸ್ಥೆ ಇದೆ. ಆಕೆ ಸುಧಾರಿಸಿಕೊಳ್ಳುವವರಿಗೆ ವಿದೇಶಕ್ಕೆ ಕರೆದೊಯ್ಯುವ ಕುರಿತು ವೈದ್ಯರು ಎಚ್ಚರಿಸಿದ್ದಾರೆ.

ಬೆನ್ನುಹುರಿಯಲ್ಲಿನ ಗುಂಡನ್ನು ತೆಗೆಯಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಸಾಕಷ್ಟು ರಕ್ತಸ್ರಾವವಾಗಿತ್ತು. ಹಾಗಾಗಿ ಆಕೆ ಸುಧಾರಿಸಿಕೊಳ್ಳಲು ಕನಿಷ್ಠ ಹತ್ತು ದಿನಗಳು ಬೇಕಾಗುತ್ತದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಮುಮ್ತಾಜ್ ಖಾನ್ ತಿಳಿಸಿದ್ದಾರೆ.ಸದ್ಯಕ್ಕೆ ಆಕೆಯ ತಲೆ ಭಾಗದಲ್ಲಿ ಆಗಿರುವ ಗಾಯದ ಸ್ಥಳದಲ್ಲಿ ಊತ ಕಾಣಿಸಿಕೊಳ್ಳದಿರಲು ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ ಎಂದೂ ಅವರು ಹೇಳಿದರು.

ಕಯಾನಿ ಭೇಟಿ: ಸೇನಾ ಆಸ್ಪತ್ರೆಗೆ ಭೇಟಿ ನೀಡಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಅವರು ಮಲಾಲ ಆರೋಗ್ಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಮಲಾಲ ಮೇಲೆ ನಡೆದಿರುವ ದಾಳಿ ಉಗ್ರರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಉಗ್ರರನ್ನು ಬಗ್ಗು ಬಡಿಯಲು ಸೇನೆ ಸಶಕ್ತವಾಗಿದೆ~ ಎಂದರು.

ಈ ನಡುವೆ ಮಲಾಲ ಮೇಲೆ ನಡೆದಿರುವ ದಾಳಿಯನ್ನು ತಾವೇ ಮಾಡಿರುವುದಾಗಿ ತೇಹ್ರಿಕ್-ಎ- ತಾಲಿಬಾನ್ ಹೊಣೆ ಹೊತ್ತುಕೊಂಡಿದೆ. ಮಲಾಲ ತಾಲಿಬಾನಿಯರ ವಿರುದ್ಧ ಧ್ವನಿ ಎತ್ತಿದ್ದು, ಅದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳಲು ದಾಳಿ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಆಕೆ ಸುಧಾರಿಸಿಕೊಂಡರೂ, ಪುನಃ ದಾಳಿ ನಡೆಸುವುದಾಗಿ ಎಚ್ಚರಿಸಿದೆ.

ಸುಳಿವು ನೀಡಿದವರಿಗೆ ಬಹುಮಾನ: ಹಾಗಾಗಿ ಮಲಾಲ ಮೇಲೆ ದಾಳಿ ಮಾಡಿದ ಉಗ್ರರ ಸುಳಿವು ನೀಡಿದವರಿಗೆ ಪಾಕಿಸ್ತಾನ ಸರ್ಕಾರ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.