ADVERTISEMENT

ದಲೈಲಾಮಗೆ ವೀಸಾ ವಿಳಂಬ: ವಿರೋಧ ಪಕ್ಷಗಳಿಂದ ಕೋರ್ಟಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಜೋಹಾನ್ಸ್‌ಬರ್ಗ್ (ಪಿಟಿಐ):  ಟಿಬೆಟನ್ ಧಾರ್ಮಿಕ ಗುರು ದಲೈಲಾಮ ಅವರಿಗೆ ವೀಸಾ ನೀಡುವಿಕೆಯಲ್ಲಿ ಸರ್ಕಾರ ನಿಯಮ ಗಳನ್ನು ಉಲ್ಲಂಘನೆ ಮಾಡಿದೆ ಎನ್ನುವ ವಿರೋಧ ಪಕ್ಷಗಳ ವಾದವನ್ನು ಆಡಳಿತಾರೂಢ ಎಎನ್‌ಸಿ ಅಲ್ಲ ಗಳೆದಿದೆ.

ದಲೈಲಾಮ ಅವರು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲು ವೀಸಾ ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎನ್ನುವ ಎರಡು ಪ್ರಮುಖ ವಿರೋಧ ಪಕ್ಷಗಳ ಟೀಕೆ ಕೇವಲ ಪ್ರಚಾರದ ಗೀಳು ಎಂದು ಎಎನ್‌ಸಿ ಬಣ್ಣಿಸಿದೆ.

 ದಲೈಲಾಮ ಅವರು ಪುನಃ ಸಲ್ಲಿಸಲಿರುವ ವೀಸಾ ಅರ್ಜಿಯ ತುರ್ತು ವಿಲೆವಾರಿಗಾಗಿ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಏಕತಾ ಪ್ರೀಂಡಂ ಪಾರ್ಟಿ (ಐಎಫ್‌ಪಿ) ಮತ್ತು ಕಾಂಗ್ರೆಸ್ ಆಫ್ ದಿ ಪೀಪಲ್ (ಸಿಒಪಿಇ) ವೆರ್ಸ್ಟ್ರನ್  ಕೇಪ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಚ್ ಬಿಷಪ್ ಡೆಸ್ಮಡ್ ಟಿಟು ಅವರ 80ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ದಲೈಲಾಮ ಅವರು ದಕ್ಷಿಣ ಆಫ್ರಿಕಾಗೆ ಒಂದು ವಾರ ಪ್ರವಾಸ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರಿಗೆ ಇದುವರೆಗೆ ವೀಸಾ ದೊರೆತಿಲ್ಲ.

ಪ್ರವಾಸ ಕಾಲದಲ್ಲಿ  ದಲೈಲಾಮ ಅವರು ಹಲವು ಸಾರ್ವಜನಿಕ ಉಪನ್ಯಾಸವನ್ನೂ ನೀಡುವ ಕಾರ್ಯಕ್ರಮ ರೂಪಿಸ ಲಾಗಿತ್ತು.

ಚೀನಾದೊಂದಿಗೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ದಲೈಲಾಮ ಅವರಿಗೆ ವೀಸಾ ನೀಡಿದರೆ ತಮ್ಮ ಸಂಬಂಧಕ್ಕೆ ಧಕ್ಕೆ ಆಗಬಹುದು ಎನ್ನುವ ಕಾರಣದಿಂದ ವೀಸಾ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ  ಎನ್ನಲಾಗಿದೆ.

`ದಲೈಲಾಮರಿಂದ ಉಗ್ರರಿಗೆ ಬೆಂಬಲ~
ಬೀಜಿಂಗ್(ಪಿಟಿಐ): ಚೀನಾ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ದಲೈ ಲಾಮಾ ಬೆಂಬಲಿಸುತ್ತಿದ್ದಾರೆ ಎಂದು ಚೀನಾ ಆರೋಪಿಸಿದೆ.

ಇತ್ತೀಚೆಗೆ ಒಂಬತ್ತು ಬೌದ್ಧ ಬಿಕ್ಕುಗಳು ಟಿಬೆಟ್ ಕಾರಣವನ್ನು ಮುಂದಿಟ್ಟುಕೊಂಡು ಆತ್ಮಾಹುತಿ ಮಾಡಿಕೊಂಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯವಲ್ಲದೆ ಇನ್ನೇನು ಎಂದು   ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜಿಯಾಂಗ್ ಯು ಪ್ರಶ್ನಿಸಿದ್ದಾರೆ. ಬೌದ್ಧ ಬಿಕ್ಕುಗಳು ತಮ್ಮ ಇಂತಹ ಕೃತ್ಯಗಳಿಂದ  ದಲೈಲಾಮ ಅವರಿಗೆ ದೈವಪಟ್ಟ ಕೊಡಲು ಯತ್ನಿಸುತ್ತಿದ್ದಾರೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.