ADVERTISEMENT

ದೂರವಾಣಿ ಕದ್ದಾಲಿಕೆ ಪ್ರಕರಣ.

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ನವದೆಹಲಿ (ಪಿಟಿಐ): ದೂರವಾಣಿ ಕದ್ದಾಲಿಕೆ ಪ್ರಕರಣ ಸಂಬಂಧ 2006ರಲ್ಲಿ ಕಾಂಗ್ರೆಸ್ ಮತ್ತು ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ತಾವು ಮಾಡಿರುವ ಆರೋಪಗಳನ್ನು ಕೈಬಿಡುವಂತೆ ಮನವಿ ಮಾಡಿದ್ದ  ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಮಾಜಿ ನಾಯಕ ಅಮರ್‌ಸಿಂಗ್ ಅವರು ಬುಧವಾರ ಸುಪ್ರೀಂಕೋರ್ಟ್‌ನ ತೀವ್ರ ವಿಚಾರಣೆಯನ್ನು ಎದುರಿಸಬೇಕಾಯಿತು.2006ರಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣದ ಸಂಬಂಧ ತಾವು ಸಲ್ಲಿಸಿದ್ದ ಅರ್ಜಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಮಾಡಿದ ಆರೋಪವನ್ನು ಕೈಬಿಡುತ್ತಿರುವುದಾಗಿ ಅಮರ್ ಸಿಂಗ್ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.
ಅಮರ್ ಸಿಂಗ್ ಪರ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ವಕ್ತಾರರೂ ಆಗಿರುವ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

‘ನೀವು ಸಲ್ಲಿಸಿದ ಪರಿಷ್ಕೃತ ಪ್ರಮಾಣಪತ್ರವನ್ನೇ ದೃಷ್ಟಿಯಲ್ಲಿಟ್ಟು ಹೇಳುವುದಾದರೆ, ಅಧ್ಯಕ್ಷರ ಮೂಲಕ ರಾಜಕೀಯ ಪಕ್ಷವೊಂದರ ವಿರುದ್ಧ ಮಾಡಿರುವ  ಆರೋಪಗಳನ್ನು ನೀವು ಹೇಗೆ ಸಮರ್ಥಿಸುತ್ತೀರಿ?’ ಎಂದು ನ್ಯಾಯಪೀಠ ಪ್ರಶ್ನಿಸಿತು. ಅಮರ್ ಸಿಂಗ್ 2006ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ದೂರು ಸಲ್ಲಿಸಿದ್ದರು.ದೂರವಾಣಿ ಕರೆ ಕದ್ದಾಲಿಕೆ ಪ್ರಕರಣ ಹಿಂದೆ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ವೈರಿಗಳ ಕೈವಾಡವಿದೆ ಎಂಬ ವಿಚಾರ ವೈಯಕ್ತಿಕವಾಗಿ ತಿಳಿದಿದೆ ಎಂದು 2006ರಲ್ಲಿ ಅಮರ್‌ಸಿಂಗ್ ಈ ಆರೋಪಗಳನ್ನು ಮಾಡಿದ್ದರು ಎಂದು ಸಿಂಘ್ವಿ ಹೇಳಿದಾಗ, ‘ನೀವು ನೀಡಿರುವ ಆರೋಪಗಳು ವೈಯಕ್ತಿಕ  ತಿಳಿವಳಿಕೆಯಿಂದ ನೀಡಿದ್ದು ಎಂದಾದರೆ, ಆ ವಿಚಾರದ ಬಗ್ಗೆ  ನೀವು ವೈಯಕ್ತಿಕವಾಗಿ ತಿಳಿದಿದ್ದೀರಿ ಎಂದರ್ಥ. ಆದರೆ ಆ ತಿಳಿವಳಿಕೆ ಒಂದು ನಿರ್ದಿಷ್ಟ ಅವಧಿಯಲ್ಲಿ  ಬದಲಾಗಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.