ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ತಪ್ಪಿತಸ್ಥರೆಂದು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಶುಕ್ರವಾರ ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿ, ಧೈರ್ಯವಿದ್ದರೆ ತಮ್ಮ ವಿರುದ್ಧ ಅವಿಶ್ವಾಸ ಮಂಡಿಸುವಂತೆ ಸವಾಲೆಸೆದಿದ್ದಾರೆ.
ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, `ಸಭಾಧ್ಯಕ್ಷರನ್ನು ಹೊರತುಪಡಿಸಿ ಬೇರಾರಿಗೂ ತಮ್ಮನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ~ ಎಂದು ತಮ್ಮ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು.
`ಸಂವಿಧಾನದಲ್ಲಿ ಯಾವುದೇ ಕಾನೂನು ಅಥವಾ ಸಂಪ್ರದಾಯವು ಸಭಾಧ್ಯಕ್ಷರನ್ನು ಬಿಟ್ಟು ಇತರರಿಗೆ ಸಂಸದರೊಬ್ಬರನ್ನು ಅನರ್ಹಗೊಳಿಸುವ ಅಧಿಕಾರ ನೀಡಿಲ್ಲ. ಸಭಾಧ್ಯಕ್ಷರಿಗೆ ಮಾತ್ರ ತಮ್ಮನ್ನು ಅನರ್ಹಗೊಳಿಸುವ ಅಧಿಕಾರವಿದ್ದು, ಅವರು ಹೇಳಿದರೆ ಈಗಲೇ ಹೊರಹೋಗಲು ಸಿದ್ಧ. ಅದು ಸಭಾಧ್ಯಕ್ಷರಿಗೆ ಬಿಟ್ಟ ವಿಚಾರ~ ಎಂದರು.
ಮುಖ್ಯವಾಗಿ ತಮ್ಮ ರಾಜೀನಾಮೆ ಕೇಳಿದ ಪ್ರಮುಖ ವಿರೋಧಪಕ್ಷ ಪಿಎಂಎಲ್-ಎನ್‌ಗೆ ಅವಿಶ್ವಾಸ ಮಂಡಿಸುವಂತೆ ಸವಾಲು ಹಾಕಿದ ಗಿಲಾನಿ, `ಎಲ್ಲ ಸಾಂವಿಧಾನಿಕ ಸಂಸ್ಥೆಗಳಿಗೆ ಅಧಿಕಾರ ನೀಡಿರುವ ಅಂತಿಮ ನಿರ್ಣಾಯಕ ಸ್ಥಾನದಲ್ಲಿರುವ ಸಂಸತ್ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ~ ಎಂದು ಪ್ರತಿಕ್ರಿಯಿಸಿದರು.
`ತಮ್ಮನ್ನು ಹಣಕಾಸು ಭ್ರಷ್ಟಾಚಾರ ಅಥವಾ ನೈತಿಕ ಅಧಃಪತನದ ಆಧಾರದಲ್ಲಿ ಶಿಕ್ಷೆಗೆ ಗುರಿಪಡಿಸಿಲ್ಲ. ದೇಶದ ಅಧ್ಯಕ್ಷರಿಗೆ ಕ್ಷಮಾದಾನ ನೀಡಿ, ಸಂವಿಧಾನವನ್ನು ರಕ್ಷಿಸಿದ ಕಾರಣಕ್ಕಾಗಿ ತಮಗೆ ಶಿಕ್ಷೆ ವಿಧಿಸಲಾಗಿದೆ~ ಎಂದು ಸಮರ್ಥಿಸಿಕೊಂಡರು.
`ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದರಿಂದ ತಮ್ಮ ಮೇಲೆ ಈಗ ವಿಧಿಸಿರುವ ಶಿಕ್ಷೆಯೇ ಅಂತಿಮವಲ್ಲ~ ಎಂದೂ ಅವರು ಹೇಳಿದರು.`ತಮ್ಮನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಕ್ರಮಗಳಿದ್ದು, ಇದನ್ನು ಸಭಾಧ್ಯಕ್ಷರು ಮತ್ತು ಚುನಾವಣಾ ಆಯೋಗ ಮಾತ್ರ ಕೈಗೊಳ್ಳಬೇಕಿದೆ~ ಎಂದು ಅವರು ನುಡಿದರು.
`ತಾವೊಬ್ಬ 18 ಕೋಟಿ ಮತದಾರರಿಂದ ಚುನಾಯಿತರಾದ ಪ್ರಧಾನಿಯಾಗಿದ್ದು, ಯಾರೋ ಬಯಸಿದ ಮಾತ್ರಕ್ಕೆ ತಮ್ಮನ್ನು ಹೊರಗೆಸೆಯಲಾಗದು~ ಎಂದು ಪ್ರತಿಪಕ್ಷಗಳಿಗೆ ಖಾರವಾಗಿ ತಿಳಿಸಿದರು. `ಮಾಜಿ ಪ್ರಧಾನಿಯೂ ಆಗಿರುವ ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಅವರೂ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದು, ದೇಶದಿಂದ ಗಡೀಪಾರು ಸಹ ಆಗಿದ್ದರು.
ಆದರೂ ತಮ್ಮ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು ಯಾವಾಗಲೂ ಅವರ ರಾಜೀನಾಮೆಗೆ ಅಥವಾ ಅನರ್ಹತೆಗೆ ಒತ್ತಾಯಿಸಿಲ್ಲ~ ಎಂದೂ ಹೇಳಿದರು.
`ರಾಜಕೀಯ ಗಲಭೆಗೆ ದಿಕ್ಸೂಚಿ~
ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆಗಾಗಿ ಪಾಕಿಸ್ತಾನ ಸುಪ್ರೀಂ ಕೋರ್ಟ್‌ನಿಂದ ಶಿಕ್ಷೆಗೊಳಗಾದ ಪ್ರಧಾನಿ ಯೂಸೂಫ್ ರಜಾ ಗಿಲಾನಿ ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪಾಕ್ ಮಾಧ್ಯಮಗಳು, ಇದು ಮುಂದಿನ ರಾಜಕೀಯ ಗಲಭೆಯ ಮುನ್ಸೂಚನೆಯಾಗಿದ್ದು, ಚುನಾವಣೆಗಳು ಸನ್ನಿಹಿತವಾಗುವ ಆತಂಕ ವ್ಯಕ್ತಪಡಿಸಿವೆ.
ಏಳು ಮಂದಿ ನ್ಯಾಯಮೂರ್ತಿಗಳ ಪೀಠ ಶಿಕ್ಷೆ ವಿಧಿಸಿರುವ ಸುದ್ದಿಯನ್ನು ಪಾಕ್‌ನ ಪ್ರಮುಖ ಇಂಗ್ಲಿಷ್, ಉರ್ದು ದೈನಿಕಗಳು ಮುಖಪುಟದಲ್ಲಿ ಪ್ರಕಟಿಸಿವೆ. ಈ ಪ್ರಕರಣ ದೇಶದ ರಾಜಕೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.
ಆಡಳಿತದಲ್ಲಿ ಗಿಲಾನಿ ಹಿಡಿತ ಸಾಧಿಸಿದ್ದರೂ, ಕೋರ್ಟ್‌ನಿಂದ ಪ್ರಧಾನಿಯೇ ಶಿಕ್ಷೆಗೊಳಗಾದ ಈ ಪ್ರಕರಣ ಮತ್ತೆ ರಾಜಕೀಯ ಅಸ್ಥಿರತೆಗೆ ದೂಡುವ ಲಕ್ಷಣಗಳಿವೆ ಎಂಬರ್ಥದಲ್ಲಿ ಪಾಕ್‌ನ ಇಂಗ್ಲಿಷ್ ಹಾಗೂ ದೈನಿಕಗಳು ವರದಿ ಮಾಡಿವೆ.
ಪಾಕಿಸ್ತಾನದ ಈಗಿನ ರಾಜಕೀಯಕ್ಕೆ ಮಂಕು ಕವಿದಿದ್ದು ಸಾಕಷ್ಟು ಗೊಂದಲವಿದೆ. ಇಂತಹ ಸಂದರ್ಭದಲ್ಲಿ ಈ ಪ್ರಕರಣ ರಾಜಕೀಯ ಗಲಭೆಗೆ ಪುಷ್ಟಿ ನೀಡುವಂತಾಗಿದ್ದು, ತೀರ್ಪಿನಲ್ಲಿ ಸ್ಪಷ್ಟತೆಯೂ ಇಲ್ಲ ಎಂದು `ಡಾನ್~ ಪತ್ರಿಕೆ ವರದಿಯಲ್ಲಿ ತಿಳಿಸಿದೆ. ರಾಜಕೀಯ ಇತಿಹಾಸದಲ್ಲಿ ಇದೊಂದು ಕಪ್ಪು ಅಧ್ಯಾಯ ಎಂದು `ದಿ ನ್ಯೂಸ್~ ವರದಿ ಮಾಡಿದೆ. ಮತ್ತೊಂದು ಪ್ರಮುಖ ಇಂಗ್ಲಿಷ್ ದೈನಿಕ `ದಿ ಡೇಲಿ ಟೈಮ್ಸ~ನ ಅಗ್ರಸುದ್ದಿಯ ತಲೆಬರಹ ಹೀಗಿದೆ: ~ಶಿಕ್ಷೆ, ಜೈಲಿಗೆ, ಬಿಡುಗಡೆ- ಈ ಎಲ್ಲವೂ ಮುಗಿದದ್ದು 32 ಸೆಕೆಂಡ್‌ಗಳಲ್ಲಿ~
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.