
ಪ್ಯಾರಿಸ್ (ಎಎಫ್‌ಪಿ): ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹಾಲನ್ ಅವರು ಖ್ಯಾತ ನಟಿ ಜ್ಯೂಲಿ ಗೇಯೆಟ್ ಅವರೊಂದಿಗೆ ‘ಸಂಬಂಧ’ ಹೊಂದಿದ್ದಾರೆ ಎಂದು ಸ್ಥಳೀಯ ನಿಯತಕಾಲಿಕೆ ‘ಕ್ಲೋಸರ್’ ಆರೋಪಿಸಿದೆ. ಜೊತೆಗೆ, ರಾಷ್ಟ್ರದ ಮುಖ್ಯಸ್ಥರ ಭದ್ರತೆ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದೆ.
ನಟಿಯೊಂದಿಗೆ ರಾತ್ರಿ ಕಳೆಯುವುದಕ್ಕಾಗಿ ಪ್ಯಾರಿಸ್‌ನ ರಸ್ತೆಗಳಲ್ಲಿ 59 ವರ್ಷದ ಹಾಲನ್ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿರುವ, ಜ್ಯೂಲಿ ಅವರಿದ್ದ ಅಪಾರ್ಟ್ಮೆಂಟ್ ಪ್ರವೇಶಿಸುತ್ತಿರುವ ಚಿತ್ರಗಳನ್ನು ‘ಕ್ಲೋಸರ್‘ ತನ್ನ ಈ ವಾರದ ಸಂಚಿಕೆಯಲ್ಲಿ ಪ್ರಕಟಿಸಿದೆ.
ವರದಿಗೆ ಆಕ್ರೋಶ ವ್ಯಕ್ತಪಡಿಸಿರುವ ಹಾಲನ್ ಅವರು ಆರೋಪಗಳನ್ನು ತಳ್ಳಿಹಾಕಿಲ್ಲ. ಆದರೆ, ಇದು ವ್ಯಕ್ತಿಯೊಬ್ಬನ ಖಾಸಗಿತನದ ಉಲ್ಲಂಘನೆ ಎಂದು ಹೇಳಿದ್ದಾರೆ. ಅಲ್ಲದೇ ‘ಕ್ಲೋಸರ್’ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆಯನ್ನೂ ಹಾಕಿದ್ದಾರೆ.
‘ಫ್ರಾಂಕೊಯಿಸ್ ಹಾಲನ್ ಆಂಡ್ ಜ್ಯೂಲಿ ಗೇಯೆಟ್ -– ದ ಪ್ರೆಸಿಡೆಂಟ್ಸ್ ಲವ್’ ಎಂಬ ತಲೆ ಬರಹದ ಅಡಿಯಲ್ಲಿ ಏಳು ಪುಟಗಳಲ್ಲಿ ಹರಡಿಕೊಂಡಿರುವ ಚಿತ್ರ ಮತ್ತು ಸುದ್ದಿ ‘ಕ್ಲೋಸರ್‘ ಪ್ರಕಟಿಸಿದೆ.
ತಾನು ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ನಿಯತಕಾಲಿಕೆಯು 41 ವರ್ಷದ ನಟಿ ಜ್ಯೂಲಿ ಅವರು ಡಿ. 30ರಂದು ಪ್ಯಾರಿಸ್‌ನ ಅಪಾರ್ಟ್ಮೆಂಟ್ವೊಂದಕ್ಕೆ ಬರುತ್ತಿರುವ ಚಿತ್ರವನ್ನು ಪ್ರಕಟಿಸಿದೆ. ಈ ಅಪಾರ್ಟ್ಮೆಂಟ್ ಹಾಲನ್ ನೆಲೆಸಿರುವ ಎಲಿಸೀ ಅರಮನೆಯ ಸಮೀಪವೇ ಇದೆ.
ಅರ್ಧ ಗಂಟೆಯ ನಂತರ ಹಾಲನ್ ಅವರ ಅಂಗರಕ್ಷಕ ಎಂದು ಹೇಳಲಾಗಿರುವ ವ್ಯಕ್ತಿಯೊಬ್ಬ ಅಪಾರ್ಟ್ಮೆಂಟ್ ಪ್ರವೇಶ ದ್ವಾರವನ್ನು ಪರಿಶೀಲಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಸ್ಕೂಟರ್‌ವೊಂದು ಆ ಅಪಾರ್ಟ್‌ಮೆಂಟ್‌ಗೆ ಬರುತ್ತದೆ. ಸ್ಕೂಟರ್‌ನಲ್ಲಿ ಇಬ್ಬರು ಹೆಲ್ಮೆಟ್ಧಾರಿಗಳಿರುತ್ತಾರೆ. ಅವರಲ್ಲಿ ಒಬ್ಬರು ಹಾಲನ್ ಎಂದು ‘ಕ್ಲೋಸರ್’ ಹೇಳಿದೆ. ಮತ್ತೊಬ್ಬರ ಗುರುತನ್ನು ಬಹಿರಂಗ ಪಡಿಸಲಾಗಿಲ್ಲ.
ಆ ಅಂಗರಕ್ಷಕನು ಹಾಲನ್ ಅವರ ಅಧಿಕೃತ ಭದ್ರತಾ ಸಿಬ್ಬಂದಿ ಎಂದು ಹೇಳಲಾಗಿದೆ.
ಮರುದಿನ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಅದೇ ಅಂಗರಕ್ಷಕ ಆ ಅಪಾರ್ಟ್‌ಮೆಂಟ್‌ಗೆ ಬರುವ ಮತ್ತು 3 ಗಂಟೆಗಳ ನಂತರ ಹೆಲ್ಮೆಟ್ ಧರಿಸಿರುವ ವ್ಯಕ್ತಿಯೊಬ್ಬರು ಹಿಂಬದಿ ಸವಾರನಾಗಿ ಅದೇ ಅಂಗರಕ್ಷಕನ ರಕ್ಷಣೆಯಲ್ಲಿ ಅಪಾರ್ಟ್ಮೆಂಟ್ನಿಂದ ತೆರಳುತ್ತಿರುವ ಚಿತ್ರಗಳನ್ನು ‘ಕ್ಲೋಸರ್’ ಪ್ರಕಟಿಸಿದೆ.
ಎರಡು ಮಕ್ಕಳ ತಾಯಿ ಆಗಿರುವ ಜ್ಯೂಲಿ ಅವರೊಂದಿಗೆ ಹಾಲನ್ ‘ಸಂಬಂಧ’ ಹೊಂದಿದ್ದಾರೆ ಎಂಬ ವದಂತಿಗಳು ಹಲವು ತಿಂಗಳುಗಳಿಂದ ಸುಳಿದಾಡುತ್ತಿದ್ದವು.
ಡಿಸೆಂಬರ್‌ನಲ್ಲಿ ಟಿವಿ ಚಾನೆಲ್‌ನಲ್ಲಿ ಜ್ಯೂಲಿ ನಟಿಸಿದ್ದ ಸಿನಿಮಾ ಕುರಿತಂತೆ ಚರ್ಚೆ ನಡೆಯುತ್ತಿದ್ದಾಗ ಸಹ ನಟ ಸ್ಟೀಫನ್ ಗಿಲ್ಲೊನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ದ್ವಂದ್ವಾರ್ಥದ ಹೇಳಿಕೆ ನೀಡಿದ್ದರು.
ಇವರಿಬ್ಬರ ನಡುವಣ ’ಸಂಬಂಧ’ದ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿತ್ತು.
ಹಾಲನ್ ಅವರು ಆಗಾಗ ‘ಕಣ್ತಪ್ಪಿಸಿಕೊಳ್ಳುತ್ತಿರುವುದು’ ಅಧ್ಯಕ್ಷರ ನಿವಾಸದ ಭದ್ರತಾ ಸಿಬ್ಬಂದಿಯಲ್ಲಿ ಆತಂಕ ಉಂಟು ಮಾಡಿದೆ ಎಂದು ಕಳೆದ ತಿಂಗಳು ಪ್ರತಿಷ್ಠಿತ ವಾರಪತ್ರಿಕೆ ‘ಎಲ್’ಎಕ್ಸ್‌ಪ್ರೆಸ್’ ವರದಿ ಮಾಡಿತ್ತು.
ಸದ್ಯ ಹಾಲನ್ ಅವರು ಪತ್ರಕರ್ತೆ ವಲೆರೀ ಟ್ರೈರ್‌ವೀಲರ್ ಅವರೊಂದಿಗೆ ನೆಲೆಸಿದ್ದಾರೆ. ಇದಕ್ಕೂ ಮುನ್ನ ಅವರು ತಮ್ಮ ರಾಜಕೀಯ ಸಹವರ್ತಿ ಸೆಗೊಲೆನೆ ರಾಯಲ್ ಅವರನ್ನು ತೊರೆದಿದ್ದರು (ಈ ಜೋಡಿಗೆ ನಾಲ್ವರು ಮಕ್ಕಳಿದ್ದರು).
50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜ್ಯೂಲಿ, ಹಾಲನ್ ಅವರ 2012ರ ಚುನಾವಣಾ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು.
ಕಾನೂನು ಕ್ರಮದ ಎಚ್ಚರಿಕೆ
ನಟಿ ಜ್ಯೂಲಿ ಗೇಯೆಟ್ ಹಾಗೂ ತಮ್ಮ ನಡುವೆ ‘ಸಂಬಂಧ’ ಇದೆ ಎಂದು ಸುದ್ದಿ ಪ್ರಕಟಿಸಿರುವ ‘ಕ್ಲೋಸರ್’ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಚಿಸುತ್ತಿರುವುದಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹಾಲನ್ ಹೇಳಿದ್ದಾರೆ.
ವರದಿಯನ್ನು ಖಂಡಿಸಿರುವ ಹಾಲನ್, ‘ಇದು, ಪ್ರತಿಯೊಬ್ಬ ವ್ಯಕ್ತಿ ಹೊಂದಿರುವ ಖಾಸಗಿತನದ ಮೇಲಿನ ದಾಳಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.