ADVERTISEMENT

ನನ್ನ ಹತ್ಯೆಗೆ ಯತ್ನ: ಬ್ರಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಲಂಡನ್ (ಪಿಟಿಐ):  ಭಾನುವಾರ ರಾತ್ರಿ ತಮ್ಮ ಮೇಲೆ ಇಲ್ಲಿ ನಡೆದ ದಾಳಿಯು ತಮ್ಮನ್ನು ಹತ್ಯೆ ಮಾಡುವ ಸಂಚಿನ ಭಾಗವಾಗಿದೆ  ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಸ್. ಬ್ರಾರ್ ಹೇಳಿದ್ದಾರೆ.

ಅಮೃತಸರದ ಸ್ವರ್ಣ ಮಂದಿರದಲ್ಲಿ 1984ರಲ್ಲಿ ನಡೆದಿದ್ದ `ಬ್ಲೂ ಸ್ಟಾರ್~ ಕಾರ್ಯಾಚರಣೆಯಲ್ಲಿ ತಾವು ನಿರ್ವಹಿಸಿದ ಪಾತ್ರಕ್ಕಾಗಿ ಖಲಿಸ್ತಾನ ಪರ ಶಕ್ತಿಗಳು ತಮ್ಮನ್ನು ಹತ್ಯೆ ಮಾಡಲು ಯತ್ನಿಸಿವೆ  ಎಂದು ಅವರು ಹೇಳಿದ್ದಾರೆ.



ಖಾಸಗಿ ಭೇಟಿಗಾಗಿ ಲಂಡನ್‌ಗೆ ಪತ್ನಿಯೊಂದಿಗೆ ಆಗಮಿಸಿದ್ದ ಬ್ರಾರ್ ಅವರ ಮೇಲೆ ಜನನಿಬಿಡ ಮಾರ್ಬಲ್ ಆರ್ಕ್ ಪ್ರದೇಶದಲ್ಲಿ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿ, ಕುತ್ತಿಗೆಯನ್ನು ಚೂರಿಯಿಂದ ಇರಿದಿದ್ದರು. 

 `ಇದು ನನ್ನನ್ನು ಕೊಲ್ಲಲು ನಡೆಸಿದ ಯತ್ನವಾಗಿದೆ. ಇಂಟರ್‌ನೆಟ್ ಮೂಲಕ ನನಗೆ ಈ ಮೊದಲೂ ಸಾಕಷ್ಟು ಬೆದರಿಕೆಗಳು ಬಂದಿವೆ. ನಿಮ್ಮನ್ನು ಹತ್ಯೆ ಮಾಡಲು ಹಲವು ಬಾರಿ ಯತ್ನಿಸಲಾಗಿದೆ. ಆದರೆ ಅದರಲ್ಲಿ ಅವರು ವಿಫಲರಾಗಿದ್ದಾರೆ. ಮುಂದಿನ ಯತ್ನದಲ್ಲಿ ಅವರು ಯಶಸ್ವಿಯಾಗಲಿದ್ದಾರೆ ಎಂದು ಅವುಗಳಲ್ಲಿ ಹೇಳಲಾಗಿತ್ತು~ ಎಂದು ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬ್ರಾರ್ ಹೇಳಿದ್ದಾರೆ.

`ಬ್ಲೂ ಸ್ಟಾರ್ ಕಾರ್ಯಾಚರಣೆಯ ವಾರ್ಷಿಕೋತ್ಸವ ದಿನವಾದ ಜೂನ್ 6ರಂದು ಪ್ರತಿವರ್ಷ ಉಗ್ರವಾದಿ ಸಿಖ್ಖರು ಲಂಡನ್‌ನಲ್ಲಿ ಮೆರವಣಿಗೆ ನಡೆಸಿ, ನನ್ನನ್ನು ಕೊಲ್ಲಲೇಬೇಕು ಎಂದು ಪ್ರತಿಜ್ಞೆ ಮಾಡುತ್ತಾರೆ. ಹೀಗಾಗಿ ನನ್ನನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ~ ಎಂದು ಬ್ರಾರ್ ಅಭಿಪ್ರಾಯ ಪಟ್ಟಿದ್ದಾರೆ.

`ದಾಳಿ ನಡೆಸಿದ ದುಷ್ಕರ್ಮಿಗಳು ಖಲಿಸ್ತಾನ ಪರ ಸಹಾನುಭೂತಿ ಹೊಂದಿದವರು ಎಂಬುದು ಸ್ಪಷ್ಟ. `ಬ್ಲೂ ಸ್ಟಾರ್~ ಕಾರ್ಯಾಚರಣೆ ನಡೆದ ಬಳಿಕ ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಲೇ ಇದ್ದಾರೆ~ ಎಂದು  ಹೇಳಿದ್ದಾರೆ.

ಭಾನುವಾರ ನಡೆದ ಘಟನೆಯನ್ನು ವಿವರಿಸಿದ 78 ವರ್ಷದ ಬ್ರಾರ್, `ಆ ಮೂರು ದೈತ್ಯರೊಂದಿಗೆ ನಾನು ಹೇಗೆ ಹೋರಾಡಿದೆ ಎಂಬುದನ್ನು ಊಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ನಿರ್ವಹಿಸಿದ ಕಾರಣದಿಂದಲೋ ಏನೋ, ಸ್ವಯಂ ರಕ್ಷಣೆ ಸಾಧ್ಯವಾಯಿತು~ ಎಂದು ಹೇಳಿದ್ದಾರೆ.

ದಾಳಿಕೋರರು ಉದ್ದನೆಯ ಗಡ್ಡ ಹೊಂದಿದ್ದರು- ಪೊಲೀಸ್
ಲಂಡನ್ (ಪಿಟಿಐ): ನಿವೃತ್ತ ಲೆ.ಜ ಕೆ.ಎಸ್. ಬ್ರಾರ್ ಮೇಲೆ ದಾಳಿ ನಡೆಸಿದ್ದ ನಾಲ್ವರು ದುಷ್ಕರ್ಮಿಗಳು ಗಾಢ ಬಣ್ಣದ ಬಟ್ಟೆ ಧರಿಸಿದ್ದರು. ಕಪ್ಪುಬಣ್ಣದ ಉದ್ದನೆಯ ಜಾಕೆಟ್ ತೊಟ್ಟಿದ್ದರು ಮತ್ತು ಉದ್ದನೆಯ ಗಡ್ಡ ಬಿಟ್ಟಿದ್ದರು ಎಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಹೇಳಿದ್ದಾರೆ.

ಈ ದಾಳಿಕೋರರ ಬಗ್ಗೆ ಮಾಹಿತಿ ನೀಡುವಂತೆಯೂ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.
ಈ ದಾಳಿಯ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚಲು ಪತ್ತೆದಾರಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ದಾಳಿ ನಡೆದ ಬಳಿಕ ಬ್ರಾರ್ ಹಾಗೂ ಅವರ ಪತ್ನಿಗೆ ಸಹಾಯ ಮಾಡಿದ ಸಾರ್ವಜನಿಕರ ಜೊತೆ ಮಾತನಾಡಲು ತನಿಖಾಧಿಕಾರಿಗಳು ಬಯಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.