ADVERTISEMENT

ನನ್ನ ಹಾಡಿಗೇ ಮಕ್ಕಳ ಕೊಕ್: ಖ್ಯಾತ ಗಾಯಕಿ ಮಡೋನ್ನಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 10:25 IST
Last Updated 3 ಏಪ್ರಿಲ್ 2012, 10:25 IST

 ಲಂಡನ್ (ಪಿಟಿಐ): ಹಿತ್ತಲ ಗಿಡ ಮದ್ದಲ್ಲ. ಈ ಗಾದೆ ಇಂಗ್ಲೆಂಡ್ ಮಟ್ಟಿಗೂ ಸುಳ್ಳಲ್ಲ. ಖ್ಯಾತ ಗಾಯಕಿ ಮಡೋನ್ನಾಗೂ ಇದು ಅನುಭವವಾಗಿದೆ.

ಹೌದು, ಇಷ್ಟವಾಗದೇ ಇದ್ದರೆ ನನ್ನ ಗಾಯನವನ್ನು ನನ್ನ ಮಕ್ಕಳೇ ಕಟುವಾಗಿ ಟೀಕಿಸುತ್ತಾರೆ ಎಂದು ಖ್ಯಾತ ಪಾಪ್ ಗಾಯಕಿ ಮಡೋನ್ನಾ ಹೇಳುತ್ತಾರೆ.

~ನನ್ನ ನಾಲ್ಕು ಮಂದಿ ಮಕ್ಕಳೂ ನನ್ನ ಗಾಯನದ ವಿಚಾರದಲ್ಲಿ ಅತ್ಯಂತ ಪ್ರಾಮಾಣಿಕರು. ನನ್ನ ಭಾವನೆಗಳಿಗೆ ಘಾಸಿಯಾಗುತ್ತದಾದರೂ ಅವರು ಸುಳ್ಳು ಹೇಳುತ್ತಿಲ್ಲ ಎಂಬ ಸಂತಸ ನನಗಿದೆ~ ಎಂಬುದು 53ರ ಹರೆಯದ ಮಡೋನ್ನಾ ಹೇಳಿಕೆ ಎಂದು ಶೋಬಿಝ್ ಸ್ಪೈ ವರದಿ ಮಾಡಿದೆ.

~ಇಷ್ಟವಾಗದ್ದನ್ನು ಹೇಳುವ ವಿಚಾರ ಬಂದಾಗ ನನ್ನ ಮಕ್ಕಳು ಅತ್ಯಂತ ಕಟು ಪ್ರಾಮಾಣಿಕರು. ಅವರಿಗೆ ಒಂದಿಷ್ಟೂ ಔಚಿತ್ಯ ಪ್ರಜ್ಞೆ ಇಲ್ಲ. ಹಾಡು ನನ್ನದೇ ಆಗಿದ್ದರೂ ~ಅಮ್ಮಾ ಅದನ್ನು ನಿಲ್ಲಿಸಿಬಿಡು~ ಎಂದು ಅವರು ಅತ್ಯಂತ ಕಠಿಣವಾಗಿ ಹೇಳುತ್ತಾರೆ. ಇದು ಮನಸ್ಸಿಗೆ ಘಾಸಿ ಉಂಟು ಮಾಡುತ್ತದೆ. ಆದರೆ ಕನಿಷ್ಠ ಅವರು ಪ್ರಾಮಾಣಿಕರಾಗಿದ್ದಾರಲ್ಲ ಎಂದು ಸಂತಸವಾಗುತ್ತದೆ~ ಎಂದು ಮಡೋನ್ನಾ ಹೇಳಿದ್ದನ್ನು ವರದಿ ಉಲ್ಲೇಖಿಸಿದೆ.

ಮಡೋನ್ನಾ ಅವರು ಮೇ 29ರಂದು ಆರಂಭವಾಗುವ ವಿಶ್ವ ಪಯಣದ ಸಿದ್ಧತೆಯಲ್ಲಿದ್ದಾರೆ. 25 ವರ್ಷಗಳ ನನ್ನ ಗಾಯನ ಜೀವನದಲ್ಲಿ ಇಷ್ಟೊಂದು ಕಠಿಣ ಶ್ರಮವನ್ನು ನಾನು ವಹಿಸಿಲ್ಲ ಎಂದೀಗ ನಾನು ಹೇಳಬೇಕಾಗಿದೆ. ನನ್ನ ಇಡೀ ಜೀವನವೇ ಕಠಿಣ ಶ್ರಮ ಮತ್ತು ಪ್ರಾರ್ಥನೆಯ ಸಂಯೋಗವಾಗಿದೆ. ಆದರೆ ಹೆಚ್ಚು ದೇವತೆಗಳು ನಿಮ್ಮನ್ನು ಗಮನಿಸುತ್ತಿರುವಾಗ ಇನ್ನಷ್ಟು ಹೆಚ್ಚಿನ ಸಿದ್ಧತೆ ಅತ್ಯಗತ್ಯ~ ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.