ADVERTISEMENT

‘ನಮೋ’ ಆ್ಯಪ್‌ನ ದತ್ತಾಂಶಗಳ ಮಾರಾಟ ಇಲ್ಲ

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
‘ನಮೋ’ ಆ್ಯಪ್‌ನ ದತ್ತಾಂಶಗಳ ಮಾರಾಟ ಇಲ್ಲ
‘ನಮೋ’ ಆ್ಯಪ್‌ನ ದತ್ತಾಂಶಗಳ ಮಾರಾಟ ಇಲ್ಲ   

ವಾಷಿಂಗ್ಟನ್: ‘ನರೇಂದ್ರ ಮೋದಿ ಆ್ಯಪ್‌ನಿಂದ ಪಡೆದುಕೊಂಡ ಮಾಹಿತಿಗಳನ್ನು ನಾವು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಮತ್ತು ಯಾರಿಗೂ ಮಾರಾಟ ಮಾಡುವುದಿಲ್ಲ’ ಎಂದು ಅಮೆರಿಕದ ಕ್ಲೆವರ್‌ಟ್ಯಾಪ್ ಕಂಪನಿಯ ಸಹ ಸಂಸ್ಥಾಪಕ ಆನಂದ್ ಜೈನ್ ಹೇಳಿದ್ದಾರೆ.

ಈ ಆ್ಯಪ್‌ನಲ್ಲಿ ಸಂಗ್ರಹವಾದ ಮಾಹಿತಿಗಳನ್ನು ಅಮೆರಿಕ ಮೂಲದ http://in.wzrkt.com (ವಿಜ್‌ರಾಕೆಟ್) ಎಂಬ ಡೊಮೈನ್‌ಗೆ ರವಾನಿಸಲಾಗುತ್ತಿದೆ ಎಂದು ಈಚೆಗೆ ಫ್ರೆಂಚ್ ಸೈಬರ್ ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್‌ಸನ್ ಟ್ವೀಟ್ ಮಾಡಿದ್ದರು. ಆನಂತರ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳು ಪರಸ್ಪರ ಕೆಸರೆರಚಾಟ ಆರಂಭಿಸಿವೆ. ಈ ಸಂಬಂಧ ಕಂಪನಿಯ ಪ್ರತಿಕ್ರಿಯೆ ಕೇಳಿದಾಗ, ಪಿಟಿಐಗೆ ಆನಂದ್ ಅವರು ಕಳುಹಿಸಿರುವ ಇ–ಮೇಲ್‌ನಲ್ಲಿ ಈ ಉತ್ತರವಿದೆ.

ನಮೋ ಆ್ಯಪ್‌ನಿಂದ ವಿಜ್‌ರಾಕೆಟ್‌ಗೆ ದತ್ತಾಂಶ ರವಾನೆಯಾಗುತ್ತದೆ ಎಂಬ ಆರೋಪ ತೀವ್ರವಾಗುತ್ತಿದ್ದಂತೆಯೇ ಆನಂದ್ ತಮ್ಮ ಬ್ಲಾಗ್‌ನಲ್ಲಿ ಸೋಮವಾರ ಈ ಬಗ್ಗೆ ಸ್ಪಷ್ಟನೆ ಬರೆದುಕೊಂಡಿದ್ದರು.

ADVERTISEMENT

‘ಕ್ಲೆವರ್‌ಟ್ಯಾಪ್ ಎಂಬುದು ಒಂದು ಬ್ರ್ಯಾಂಡ್ ಅಷ್ಟೆ. ವಿಜ್‌ರಾಕೆಟ್‌, ಕ್ಲೆವರ್‌ ಟ್ಯಾಪ್‌ನ ಮಾತೃ ಸಂಸ್ಥೆ. ಹೀಗಾಗಿ ಮಾತೃಸಂಸ್ಥೆಗೆ ದತ್ತಾಂಶ ರವಾನೆಯಾಗುತ್ತದೆ. ನಮ್ಮಲ್ಲಿ ದತ್ತಾಂಶಗಳು ಗೂಢಲಿಪಿ ಸ್ವರೂಪದಲ್ಲಿ ಸಂಗ್ರಹವಾಗಿರುತ್ತವೆ. ದತ್ತಾಂಶಗಳನ್ನು ಹೇಗೆಲ್ಲಾ ಬಳಸಿಕೊಳ್ಳಲಾಗುತ್ತದೆ ಎಂಬುದರ ಮೇಲೆ ಆ್ಯಪ್‌ನ ನಿರ್ವಾಹಕರು ನಿಗಾ ಇರಿಸಿರುತ್ತಾರೆ. ಅವರು ಯಾವ ರೀತಿ ನಿಗಾ ಇರಿಸುತ್ತಾರೆ ಎಂಬುದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಆನಂದ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

ಮನೋಭೂಮಿಕೆ ವಿಶ್ಲೇಷಣೆ: ನಮೋ ಆ್ಯಪ್‌ನಲ್ಲಿ ಸಂಗ್ರಹವಾದ ಬಳಕೆದಾರರ ಮಾಹಿತಿ–ದತ್ತಾಂಶಗಳನ್ನು ವಿಶ್ಲೇಷಿಸುವ ಕೆಲಸವನ್ನು ಕ್ಲೆವರ್‌ಟ್ಯಾಪ್ ಮಾಡುತ್ತದೆ. ಸಾರ್ವಜನಿಕರ ಮನೋಭೂಮಿಕೆ ವಿಶ್ಲೇಷಣೆ ಮತ್ತು ಮೊಬೈಲ್‌ ಮಾರುಕಟ್ಟೆ ತಂತ್ರ ರೂಪಿಸುವ ಸೇವೆಗಳನ್ನು ಈ ಕಂಪನಿ ನೀಡುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಇರುವ ಈ ಸಂಸ್ಥೆಯನ್ನು ಮೂವರು ಭಾರತೀಯ ಯುವಕರು 2013ರಲ್ಲಿ ಸ್ಥಾಪಿಸಿದ್ದರು.

**
ವೈಯಕ್ತಿಕ ಮಾಹಿತಿ ಹಂಚಿಕೆ
ನವದೆಹಲಿ (ಪಿಟಿಐ):
ದತ್ತಾಂಶ ಕಳ್ಳತನದ ಬಗ್ಗೆ ಅಂತರ್ಜಾಲ ಬಳಕೆದಾರರಿಗೆ ದೇಶದ ಸೈಬರ್‌ ಸುರಕ್ಷತಾ ಸಂಸ್ಥೆಯಾದ ಭಾರತೀಯ ಕಂಪ್ಯೂಟರ್‌ ತುರ್ತುಸ್ಥಿತಿ ಪ್ರತಿಕ್ರಿಯಾ ತಂಡ (ಸಿಇಆರ್‌ಟಿ–ಇನ್‌) ಎಚ್ಚರಿಕೆ ನೀಡಿದೆ. ತಮ್ಮ ಮತ ಒಲವು ಮತ್ತು ಆಧಾರ್‌ ವಿವರಗಳಂತಹ ವೈಯಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್‌ ಆ್ಯಪ್‌ಗಳ ಮೂಲಕ ಹಂಚಿಕೊಳ್ಳಬಾರದು ಎಂದು ಸಿಇಆರ್‌ಟಿ–ಇನ್‌ ಹೇಳಿದೆ.

ಫೇಸ್‌ಬುಕ್‌ನಿಂದ ಮಾಹಿತಿ ಸೋರಿಕೆ ಆಗುತ್ತಿದೆ ಎಂಬ ಚರ್ಚೆಯು ತೀವ್ರ ಸ್ವರೂಪ ಪಡೆದುಕೊಂಡ ಹೊತ್ತಿನಲ್ಲಿಯೇ ಈ ಹೇಳಿಕೆ ಹೊರಬಿದ್ದಿದೆ.

ಹ್ಯಾಕಿಂಗ್‌ ತಡೆ, ಅಂತರ್ಜಾಲ ತಾಣಗಳ ಸುರಕ್ಷತಾ ವ್ಯವಸ್ಥೆಯನ್ನು ನೋಡಿಕೊಳ್ಳುವ ಕೆಲಸವನ್ನು ಸಿಇಆರ್‌ಟಿ–ಇನ್‌ ಮಾಡುತ್ತಿದೆ.

ಪಿನ್‌ ಸಂಖ್ಯೆ, ಪಾಸ್‌ವರ್ಡ್‌ಗಳು, ಕ್ರೆಡಿಟ್‌ ಕಾರ್ಡ್‌, ಬ್ಯಾಂಕ್‌ ಖಾತೆ ಮತ್ತು ಪಾಸ್‌ಪೋರ್ಟ್‌ ವಿವರಗಳು ಹಾಗೂ ಆಧಾರ್‌ ಮಾಹಿತಿಯನ್ನು ರಹಸ್ಯವಾಗಿಯೇ ಇರಿಸಿಕೊಳ್ಳಬೇಕು. ವೈಯಕ್ತಿಕ ಸುರಕ್ಷತೆ ಮತ್ತು ಭದ್ರತೆಗೆ ಇದು ಮುಖ್ಯ ಎಂದು ಸಿಇಆರ್‌ಟಿ–ಇನ್‌ ತಿಳಿಸಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಫೇಸ್‌ಬುಕ್‌ ಇತ್ತೀಚೆಗೆ ಒಪ್ಪಿಕೊಂಡಿದೆ. ಹಾಗಾಗಿ ಬಳಕೆದಾರರು ತಮ್ಮ ಎಚ್ಚರಿಕೆಯಲ್ಲಿ ಇರಬೇಕು ಎಂದು ಸಿಇಆರ್‌ಟಿ–ಇನ್‌ ಹೇಳಿದೆ.

ಫೇಸ್‌ಬುಕ್‌ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತಿರುವ ಅಮೆರಿಕದ ಕೇಂಬ್ರಿಜ್‌ ಅನಲಿಟಿಕಾ ಕಂಪನಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಳೆದ ವಾರ ನೋಟಿಸ್‌ ನೀಡಿತ್ತು. ಭಾರತದಿಂದ ಸಂಗ್ರಹಿಸಲಾಗಿರುವ ಮಾಹಿತಿಯ ಮೂಲಗಳು ಮತ್ತು ಭಾರತದ ಗ್ರಾಹಕರ ವಿವರ ನೀಡುವಂತೆ ಈ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ರಾಜಕೀಯ ಉದ್ದೇಶಕ್ಕಾಗಿ ಫೇಸ್‌ಬುಕ್‌ ಮಾಹಿತಿ ಬಳಕೆಯಾಗಿದೆ ಎಂಬ ವಿಚಾರ ಬಹಿರಂಗವಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿತ್ತು.

ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ್ದೆವು
ಲಂಡನ್‌ (ಪಿಟಿಐ):
‘ನಾವು ಭಾರತದಲ್ಲಿ ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ್ದೆವು’ ಎಂದು ಬ್ರಿಟನ್‌ನ ಸಂಸದೀಯ ಸಮಿತಿ ಮುಂದೆ ಕೇಂಬ್ರಿಜ್ ಅನಲಿಟಿಕಾದ ಮಾಜಿ ಉದ್ಯೋಗಿ ಕ್ರಿಸ್ಟೊಫರ್ ವೈಲಿ ಸಾಕ್ಷ್ಯ ಹೇಳಿದ್ದಾರೆ.

ಫೇಸ್‌ಬುಕ್‌ನ ಸುಮಾರು 5 ಕೋಟಿ ಬಳಕೆದಾರರ ಮಾಹಿತಿ ದುರ್ಬಳಕೆ ಮಾಡಿಕೊಂಡ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಬ್ರಿಟನ್‌ನ ಸಂಸದೀಯ ಸಮಿತಿಗೆ ಅವರು ಈ ಮಾಹಿತಿಗಳನ್ನು ನೀಡಿದ್ದಾರೆ. ಕೇಂಬ್ರಿಜ್ ಅನಲಿಟಿಕಾವು ಭಾರತದಲ್ಲೂ ರಾಜಕೀಯ ಪಕ್ಷಗಳಿಗೆ ಚುನಾವಣಾ ಸೇವೆಗಳನ್ನು ನೀಡಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಬಗ್ಗೆಯೂ ಸಮಿತಿ ತನಿಖೆ ನಡೆಸುತ್ತಿದೆ.

‘ಕೇಂಬ್ರಿಜ್ ಅನಲಿಟಿಕಾದ ಅಂಗಸಂಸ್ಥೆಯಾದ ಎಸ್‌ಸಿಎಲ್‌ನ ಚುನಾವಣಾ ಸೇವೆಗಳ ಮುಖ್ಯಸ್ಥ ಡ್ಯಾನ್ ಮುರೆಶಾನ್‌ ಭಾರತದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದರು. ಆದರೆ ಅವರು ಕೀನ್ಯಾದ ಹೋಟೆಲ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದರು’ ಎಂದು ವೈಲಿ ಹೇಳಿದ್ದಾರೆ.

‘ಕಾಂಗ್ರೆಸ್‌ಗಾಗಿ ಮುರೆಶಾನ್‌ ಕೆಲಸ ಮಾಡಬೇಕಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಬೇಕು ಎಂದು ಅಲ್ಲಿನ ಕೋಟ್ಯಧಿಪತಿಯೊಬ್ಬರು ಮುರೆಶಾನ್‌ಗೆ ಹಣ ನೀಡಿದ್ದರು ಎಂಬ ಆರೋಪ ಕೇಳಿದ್ದೇನೆ’ ಎಂದು ಪರ್ಸನಲ್‌ಡಾಟಾ ಡಾಟ್‌ ಐಒ ಸಂಸ್ಥಾಪಕ ಪಾಲ್ ಅಲಿವರ್, ಸಮಿತಿಯ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.