ADVERTISEMENT

ನವಜಾತ ಶಿಶು ರಕ್ಷಿಸಿದ ನಾಯಿ!

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಬ್ಯಾಂಕಾಕ್ (ಪಿಟಿಐ): ಹೆತ್ತವರು ನಿಷ್ಕಾರುಣ್ಯದಿಂದ ಕಸದತೊಟ್ಟಿಗೆ ಎಸೆದ ನವಜಾತ ಶಿಶುವನ್ನು ನಾಯಿಯೊಂದು ರಕ್ಷಿಸಿದ ಅಪರೂಪದ ಘಟನೆ ಇದು.

ಥಾಯ್ಲೆಂಡ್‌ನ ಥಾ ರುವಾ ಜಿಲ್ಲೆಯ ಸಾಲಾ ಲಾಯ್‌ನ ಕಸ ವಿಲೇವಾರಿ ಸ್ಥಳದಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ನೋಡಿದ  `ಪುಯ್' ಎಂಬ ಹೆಸರಿನ ನಾಯಿ ಕುತೂಹಲದಿಂದ ಅದನ್ನು ಮೂಸಿತು. ಅನುಮಾನ ಬಂದು ಚೀಲವನ್ನು ತನ್ನ ಒಡೆಯ ಗಮ್ನರ್ಡ್ ಥಾಂಗ್‌ಮಾಕ್ ಮನೆಗೆ ಕಚ್ಚಿಕೊಂಡು ಹೋಯಿತು. ಒಡೆಯನ ಗಮನ ಸೆಳೆಯಲು ಜೋರಾಗಿ ಬೊಗಳತೊಡಗಿತು.

`ನಾಯಿ ಬೊಗಳುವುದನ್ನು ಕೇಳಿ ಥಾಂಗ್‌ಮಾಕ್ ಅವರ ಸೋದರ ಸೊಸೆ ಸುದರತ್ (12) ಹೊರಕ್ಕೆ ಬಂದಳು. ಜಗುಲಿಯಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಕಣ್ಣಿಗೆ ಬಿತ್ತು.  ಕೂಡಲೇ ಅದನ್ನು ಬಿಚ್ಚಿ ನೋಡಿದಾಗ ಅಚ್ಚರಿ ಕಾದಿತ್ತು. ಆಗ ತಾನೆ ಜನಿಸಿದ ಮಗು ಅದರಲ್ಲಿತ್ತು. ತಕ್ಷಣವೇ ಅವಳು ತನ್ನ ಅಮ್ಮನಿಗೆ ವಿಷಯ ತಿಳಿಸಿದಳು. ನಂತರ ಆ ಮಗುವನ್ನು ಥಾ ರುವಾ ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದು  “ದಿ ಬ್ಯಾಂಕಾಕ್ ಪೋಸ್ಟ್‌” ವರದಿ ಮಾಡಿದೆ.

ಅವಧಿಗೆ ಮುನ್ನವೇ ಜನಿಸಿದ ಈ ಮಗು 2.2 ಕೆ.ಜಿ ಇದೆ. ಈಗ ಈ ಮಗುವಿನ ತಾಯಿಗೆ ಹುಡುಕಾಟ ನಡೆದಿದೆ.

ಮಗುವನ್ನು ರಕ್ಷಿಸಿದ್ದಕ್ಕಾಗಿ ನಾಯಿಗೆ ಉಡುಗೊರೆಯಾಗಿ ರೆಡ್ ಕ್ರಾಸ್ ವತಿಯಿಂದ ಚರ್ಮದ ಕೊರಳ ಪಟ್ಟಿ ಹಾಗೂ ಪದಕವನ್ನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.