ADVERTISEMENT

ನಾ ತೂಕ ಇಳಿಸಬೇಕು ನೀರೆ, ನೀ ದೂರ ಇರು

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST
ನಾ ತೂಕ ಇಳಿಸಬೇಕು ನೀರೆ, ನೀ ದೂರ ಇರು
ನಾ ತೂಕ ಇಳಿಸಬೇಕು ನೀರೆ, ನೀ ದೂರ ಇರು   

ಲಂಡನ್ (ಪಿಟಿಐ): ಬೊಜ್ಜು ಕರಗಿಸಬೇಕು ಎಂದು ಬಯಸಿದ್ದೀರಾ? ಹಾಗಾದರೆ ನೀವು ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವಾಗ ಸುತ್ತ ಮುತ್ತ ಮಹಿಳೆಯರು ಇರದಂತೆ ನೋಡಿಕೊಳ್ಳಿ ಎಂದು ಹೊಸ ಅಧ್ಯಯನವೊಂದು ಕಿವಿಮಾತು ಹೇಳಿದೆ.

ಲೀಡ್ಸ್‌ನ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯದ ಅಧ್ಯಯನಕಾರರು ನಡೆಸಿರುವ ಅಧ್ಯಯನದಿಂದ ಈ ಸಂಗತಿ ಬೆಳಕಿಗೆ ಬಂದಿದೆ ಎಂದು `ಡೈಲಿ    ಮೇಲ್~ ವರದಿ ಮಾಡಿದೆ.

ದೇಹ ತೂಕ ಇಳಿಸುವ ತರಬೇತಿಗೆ ಸೇರಿದ್ದ ಪುರುಷರು, ಮಹಿಳೆಯರು ಇದ್ದ ತರಗತಿಯಲ್ಲಿ ಭಾಗವಹಿಸಿ ತೂಕ ಇಳಿಸಿಕೊಂಡದ್ದಕ್ಕಿಂತ ಎರಡು ಪಟ್ಟು ಹೆಚ್ಚು ತೂಕವನ್ನು ಮಹಿಳೆಯರು ಇಲ್ಲದೇ ಇದ್ದಾಗ ಪಡೆದ ತರಬೇತಿಯಿಂದ ಕಳೆದುಕೊಂಡಿರುವುದನ್ನು ಅಧ್ಯಯನ ಪತ್ತೆ ಹಚ್ಚಿದೆ.

ಕೇವಲ ಪುರುಷರಿಗಷ್ಟೇ ಮೀಸಲಾಗಿದ್ದ ತರಬೇತಿಯಲ್ಲಿ ಭಾಗವಹಿಸಿದ್ದ ಸ್ಥೂಲಕಾಯದವರು ಸರಾಸರಿಯಾಗಿ ಸುಮಾರು ಒಂದು ಕೆ.ಜಿಯಷ್ಟು ತೂಕವನ್ನು ಕಳೆದುಕೊಂಡರೆ, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ವ್ಯಾಯಾಮ ತರಬೇತಿಯಲ್ಲಿ ಭಾಗವಹಿಸಿದ್ದ ಪುರುಷರು ಸರಾಸರಿ ಅರ್ಧ ಕೆಜಿಯಷ್ಟು ತೂಕ ಕಳೆದುಕೊಂಡಿದ್ದರು.

ಪುರುಷರಿಗಷ್ಟೇ ಮೀಸಲಾಗಿದ್ದ ತರಬೇತಿಯನ್ನು ಪೂರ್ಣಗೊಳಿಸದವರನ್ನು ಪರಿಗಣಿಸಿದರೆ ತರಬೇತಿ ಮುಗಿಯುವ ವೇಳೆಗೆ ಪ್ರತಿಯೊಬ್ಬರೂ ಸರಾಸರಿ 1.5 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದರು. ಅಲ್ಲದೇ ಅವರ ಸೊಂಟದ ಸುತ್ತಳತೆ ಎರಡು ಇಂಚಿನಷ್ಟು ಕಡಿಮೆಯಾಗಿತ್ತು ಎಂದು ಅಧ್ಯಯನ ವರದಿ ಹೇಳಿದೆ.

ಮಹಿಳೆಯರ ಮುಂದೆ ತಮ್ಮ ಸ್ಥೂಲಕಾಯದ ಬಗ್ಗೆ ಚರ್ಚಿಸಲು ಪುರುಷರು ಹಿಂಜರಿಯುವುದು ಇದಕ್ಕೆ ಕಾರಣವಾಗಿರಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ. ಜಿಮ್‌ನಲ್ಲಿ ಪುರುಷರು ಮಾತ್ರ ಇದ್ದರೆ ಅವರಲ್ಲಿ ಯಾವುದೇ ರೀತಿಯ ಅಳುಕು ಇರುವುದಿಲ್ಲ. ಹೆಚ್ಚು ಉತ್ಸಾಹದಿಂದ ವ್ಯಾಯಾಮದಲ್ಲಿ ತೊಡಗಲು ಅವರಿಗೆ ಇದು ಅವಕಾಶ ಕಲ್ಪಿಸುತ್ತದೆ ಎಂಬುದು ಅಧ್ಯಯನಕಾರರ ಅಂಬೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.