ADVERTISEMENT

ನಿಗದಿಯಂತೆ ಚುನಾವಣೆ: ತೆರೆಸಾ

ಪಿಟಿಐ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ನಿಗದಿಯಂತೆ ಚುನಾವಣೆ: ತೆರೆಸಾ
ನಿಗದಿಯಂತೆ ಚುನಾವಣೆ: ತೆರೆಸಾ   

ಲಂಡನ್‌ : ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಬ್ರಿಟನ್‌ ಪ್ರಧಾನಿ ತೆರೆಸಾ ಮೇ, ಸಾರ್ವತ್ರಿಕ ಚುನಾವಣೆ ನಿಗದಿಯಂತೆ ಜೂನ್‌ 8ರಂದು ನಡೆಯಲಿದೆ ಎಂದು ಭಾನುವಾರ ಘೋಷಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ನಡೆದಿರುವ ಮೂರು ಭಯೋತ್ಪಾದನಾ ದಾಳಿಗೆ ‘ಇಸ್ಲಾಂ ಉಗ್ರವಾದದ ಅನಿಷ್ಟ ಸಿದ್ಧಾಂತ’ವೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರತಾ ವಿಭಾಗಗಳ ಮುಖ್ಯಸ್ಥರೊಂದಿಗೆ  ತುರ್ತು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವ ಯಾವುದೇ ಹಿಂಸೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಇದು ಸೂಕ್ತ ಸಮಯ’ ಎಂದು ಹೇಳಿರುವ ಅವರು, ‘ಇಸ್ಲಾಂ ಉಗ್ರವಾದದ ಕೆಟ್ಟ ಸಿದ್ಧಾಂತವು   ಇಸ್ಲಾಂ ಅನ್ನು ತಪ್ಪು ದಾರಿಗೆ ಎಳೆಯುತ್ತಿದೆ ಮತ್ತು ಸತ್ಯವನ್ನು ವಿಕೃತಗೊಳಿಸುತ್ತಿದೆ. ಈ ಸಿದ್ಧಾಂತವನ್ನು ಸೋಲಿಸುವುದು ಈ ಸಮಯದಲ್ಲಿ ನಮ್ಮ ಮುಂದಿರುವ ಅತ್ಯಂತ ದೊಡ್ಡ ಸವಾಲು’ ಎಂದು ಹೇಳಿದ್ದಾರೆ.

‘ಬೆದರಿಕೆಯಲ್ಲಿ ಹೊಸ ಪ್ರವೃತ್ತಿಯನ್ನು ನಾವು ಕಾಣುತ್ತಿದ್ದೇವೆ. ಭಯೋತ್ಪಾದನೆಯು ಭಯೋತ್ಪಾದನೆಯನ್ನೇ ಬೆಳೆಸುತ್ತದೆ. ಒಂದು ದಾಳಿಯಿಂದ ಸ್ಫೂರ್ತಿ ಪಡೆದು ಮತ್ತೊಂದು ದಾಳಿ ನಡೆಸಲಾಗುತ್ತಿದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ತಂಡದ ಭದ್ರತೆ ಹೆಚ್ಚಳ: ದಾಳಿಯಿಂದಾಗಿ ಬ್ರಿಟನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಭದ್ರತೆಗಾಗಿ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಕ್ರಿಕೆಟ್‌ ತಂಡಗಳು ಉಳಿದುಕೊಂಡಿದ್ದ ಹೋಟೆಲ್‌ಗಳಿಗೆ ಬೀಗ ಹಾಕಲಾಗಿತ್ತು. ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಸುತ್ತ ಮುತ್ತ ಭದ್ರತೆ ಹೆಚ್ಚಿಸಲಾಗಿದೆ.

ಚುನಾವಣಾ ಪ್ರಚಾರ ಸ್ಥಗಿತ
ದಾಳಿಯ ಕಾರಣದಿಂದಾಗಿ ಎಲ್ಲ ರಾಜಕೀಯ ಪಕ್ಷಗಳು ಭಾನುವಾರ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದವು.
‘ಸೋಮವಾರದಿಂದ ಚುನಾವಣಾ ಪ್ರಚಾರ ಮತ್ತೆ ಆರಂಭವಾಗಲಿದೆ. ನಾವು ಎಲ್ಲರೂ ಒಗ್ಗಟ್ಟಿನಿಂದ ವೈರಿಗಳನ್ನು ಎದುರಿಸುತ್ತೇವೆ’ ಎಂದು ತೆರೆಸಾ ಮೇ ಹೇಳಿದ್ದಾರೆ.

ಸಹಾಯಹಸ್ತ: ದಾಳಿಗೆ ತುತ್ತಾಗಿರುವವರಲ್ಲಿ ಯಾರಾದರೂ ಭಾರತೀಯರಿದ್ದರೆ, ಅವರ ನೆರವಿಗಾಗಿ ಲಂಡನ್ನಿನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ತುರ್ತು ಸ್ಪಂದನಾ ಘಟಕ ಸ್ಥಾಪಿಸಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ ಟೀಕೆ
ವಾಷಿಂಗ್ಟನ್‌ : 
ಲಂಡನ್‌ ದಾಳಿಗೆ ಸಂಬಂಧಿಸಿ  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಲಂಡನ್ನಿನ ಪಾಕಿಸ್ತಾನ ಮೂಲದ ಮೇಯರ್‌ ಸಾದಿಕ್‌ ಖಾನ್‌ ಅವರನ್ನು ಟೀಕಿಸಿದ್ದಾರೆ. ಜೊತೆಗೆ, ಈ ದಾಳಿ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮ ವಿವಾದಿತ ಪ್ರಯಾಣ ನಿರ್ಬಂಧ ಆದೇಶವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.

‘ನಾವು ಎಲ್ಲರನ್ನೂ  ಸಂತೃಪ್ತಿಪಡಿಸುವುದಕ್ಕಾಗಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಯೋಚಿಸದಿದ್ದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

‘ಈ ದಾಳಿಯಿಂದ ಆತಂತಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಸಾದಿಕ್‌ ಖಾನ್‌ ಹೇಳಿದ್ದಾಗಿ ವರದಿಯಾಗಿತ್ತು. ಈ ಹೇಳಿಕೆ ಉಲ್ಲೇಖಿಸಿ ಟ್ರಂಪ್‌, ಖಾನ್‌ ಅವರನ್ನು ಟೀಕಿಸಿದ್ದಾರೆ. ಆದರೆ, ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಖಾನ್‌ ಹೇಳಿಕೆಯಲ್ಲಿ ಇಂತಹ ಯಾವುದೇ ಪ್ರಸ್ತಾಪ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.