ADVERTISEMENT

ನೆರವಿಗೆ ಪಾಕ್ ಹಿಂದೂಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಬಲವಂತದ ಮತಾಂತರ, ಸುಲಿಗೆ ಮತ್ತು ಅತ್ಯಾಚಾರದಂಥ ಹಿಂಸೆಗಳಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿರುವ ಹಿಂದೂಗಳು ನೆರವಿಗೆ ಬರುವಂತೆ ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಕಚೇರಿಗಳಿಗೆ ಮೊರೆ ಇಟ್ಟಿದ್ದಾರೆ.

ಮಿರ್‌ಪುರ್ಖಾಸ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಿಂದೂಗಳ ಮೇಲೆ ದುಷ್ಕರ್ಮಿಗಳು ದಿನೇ ದಿನೇ ದಾಳಿಗಳು ನಡೆಸುತ್ತಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಪಂಚಾಯತ್ ಮುಖ್ಯಸ್ಥ ಲಕ್ಷ್ಮಣದಾಸ್ ಪೆರ‌್ವಾಣಿ ಆರೋಪಿಸಿದ್ದಾರೆ.

ಹಿಂಸಾಚಾರದಿಂದ ಬೇಸತ್ತಿರುವ ಹಿಂದೂಗಳಿಗೆ ಪಾಕಿಸ್ತಾನವನ್ನು ತೊರೆಯುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲವಾಗಿದೆ. ಐದು ದಿನಗಳಲ್ಲಿ ಸುಮಾರು 18 ಕುಟುಂಬಗಳ ಸದಸ್ಯರು ಭಾರತ ಹಾಗೂ ದುಬೈಗೆ ತೆರಳಿದ್ದಾರೆ ಎಂದು ಪೆರ‌್ವಾಣಿ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಮಿರ್‌ಪುರ್ಖಾಸ್‌ನಲ್ಲಿ 70 ಹಿಂದೂ ಕುಟುಂಬಗಳ ಮನೆಗಳಲ್ಲಿ ಲೂಟಿ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡಲು ನಿರಾಕರಿಸಿದ ಇಬ್ಬರು ಯುವಕರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇಬ್ಬರು ಪ್ರಮುಖ ಉದ್ಯಮಿಗಳನ್ನು ಅಪಹರಿದ್ದು, ಲಕ್ಷಾಂತರ ರೂಪಾಯಿ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಹಿಂಸಾ ಕೃತ್ಯಗಳಿಂದ ಆತಂಕಗೊಂಡಿರುವ ಹಿಂದೂಗಳ ನೆರವಿಗೆ ಬರುವಂತೆ ಕೋರಿ ಹಿಂದೂ ಪಂಚಾಯತ್ ಸದಸ್ಯರು ಭಾರತದ ಹೈಕಮಿಷನರ್ ಮತ್ತು ಅಮೆರಿಕದ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಬಹುತೇಕ ಹಿಂದೂಗಳು ಈಗಾಗಲೇ ಸಿಂಧ್ ಪ್ರಾಂತವನ್ನು ತ್ಯಜಿಸಿದ್ದಾರೆ.

ಪಾಕ್ ಸ್ಪಷ್ಟನೆ: ಪಾಕಿಸ್ತಾನದಲ್ಲಿರುವ ಹಿಂದೂಗಳು ಭಾರತಕ್ಕೆ ನೆಲಸಲು ಹೋಗುತ್ತಿಲ್ಲ. ಬದಲಾಗಿ ಕೇವಲ ಅಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಹೋಗುತ್ತಿದ್ದಾರೆ ಎಂದು ಫೆಡರಲ್ ತನಿಖಾ ಸಂಸ್ಥೆಯು ವರದಿ ಮಾಡಿದೆ ಎಂದು ಒಳಾಡಳಿತದ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.