ADVERTISEMENT

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ: ಪರಿಸರವಾದಿ ವಾಂಗರಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ನೈರೋಬಿ, ಕೆನ್ಯಾ (ಎಎಫ್‌ಪಿ): ನೊಬೆಲ್ ಪ್ರಶಸ್ತಿ ಪುರಸ್ಕೃತ ಪರಿಸರವಾದಿ ವಾಂಗರಿ ಮಾಥಾಯ್ (71) ಭಾನುವಾರ ರಾತ್ರಿ ನಿಧನರಾದರು.

ಕೆನ್ಯಾ ದೇಶದ ಹೆಸರಾಂತ ಪರಿಸರ ಹೋರಾಟಗಾರ್ತಿಯಾದ ಇವರು 2004ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದರು. ದೀರ್ಘಕಾಲದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಇವರು, ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 1977ರಲ್ಲಿ ಗ್ರೀನ್‌ಬೆಲ್ಟ್ ಆಂದೋಲನವನ್ನು ಹುಟ್ಟು ಹಾಕಿದ ನಂತರ ಕೆನ್ಯಾದಾದ್ಯಂತ ಇವರು ಜನಪ್ರಿಯರಾಗಿದ್ದರು. ಕೆನ್ಯಾದಲ್ಲಿ ಕಾಡು ಉಳಿಸುವುದಕ್ಕೆ ಸಂಬಂಧಿಸಿದ ಜನಜಾಗೃತಿ ಕೈಂಕರ್ಯದಲ್ಲಿ ತಮ್ಮ ಬದುಕನ್ನೇ ಇವರು ಮುಡುಪಾಗಿಟ್ಟಿದ್ದರು. ಇವರ ಸಂಘಟನೆಯು ಆಫ್ರಿಕದಾದ್ಯಂತ 40 ದಶಲಕ್ಷ ಮರಗಳನ್ನು ನೆಟ್ಟು, ಬೆಳೆಸಿದೆ. ಕಾಡುನಾಶ ಮಾಡುತ್ತಿದ್ದವರ ವಿರುದ್ಧ ನೂರಾರು ಹೋರಾಟಗಳನ್ನು ಹಮ್ಮಿಕೊಂಡಿದೆ.

ಕೆನ್ಯಾದಲ್ಲಿ  ನಡೆಸಿದ ಈ ಹೋರಾಟಕ್ಕಾಗಿ ಇವರು ಪಡೆದ ನೊಬೆಲ್ ಪ್ರಶಸ್ತಿ ಹಲವು ಕಾರಣಗಳಿಂದ ಮಹತ್ವದ್ದು. ಈ ಮಹೋನ್ನತ ಪ್ರಶಸ್ತಿ ಪಡೆದ ಆಫ್ರಿಕಾ ಖಂಡದ ಮೊದಲ ಮಹಿಳೆಯಷ್ಟೇ ಅಲ್ಲ, ಈ ಗೌರವ ಪಡೆದ ಮೊದಲ ಪರಿಸರ ವಾದಿ ಎಂಬ ಹೆಗ್ಗಳಿಕೆಯೂ ಇವರದಾಗಿದೆ.

ಕೆನ್ಯಾ ರಾಜಕಾರಣದ ಮುಖ್ಯವಾಹಿನಿಯಲ್ಲಿ ಎದ್ದು ಕಾಣುತ್ತಿದ್ದ ಇವರು 2002ರಲ್ಲಿ ಇಲ್ಲಿನ ಪಾರ್ಲಿಮೆಂಟ್‌ಗೆ   ಆಯ್ಕೆಯಾಗಿದ್ದರಲ್ಲದೆ,  ಎರಡು ವರ್ಷಗಳ ಕಾಲ ಪರಿಸರ ಖಾತೆಯ ಸಚಿವೆಯೂ ಆಗಿ ಕಾರ್ಯನಿರ್ವಹಿಸಿದ್ದರು.

ಇವರು ಕೆನ್ಯಾದ ಮಾಜಿ ಅಧ್ಯಕ್ಷ ಡೇನಿಯಲ್ ಅರಾಪ್ ಅವರ ಸರ್ವಾಧಿಕಾರದ ಆಡಳಿತದ ವಿರುದ್ಧ ನಡೆದಿದ್ದ ಜನಾಂದೋಲನದಲ್ಲಿ ಪಾಲ್ಗೊಂಡು ಪೊಲೀಸರಿಂದ ಹಲವು ಸಲ ದೌರ್ಜನ್ಯಕ್ಕೆ ಒಳಗಾಗಿದ್ದರು.

ಈಚೆಗಿನ ದಿನಗಳಲ್ಲಿ ವಾಂಗರಿ ಅವರು ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಅದಕ್ಕೆ ಕಾರಣಗಳ ಕುರಿತು ದೇಶದಾದ್ಯಂತ ಜನಜಾಗೃತಿ ಮೂಡಿಸುತ್ತಿದ್ದರು. ಇವರಿಗೆ 2006ರಲ್ಲಿ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು. ಇವರು 1971ರಲ್ಲಿ ನೈರೋಬಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು. ಪೂರ್ವ ಆಫ್ರಿಕಾದಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಇವರದಾಗಿದೆ. ವಾಂಗರಿ ಮೂವರು ಮಕ್ಕಳು ಮತ್ತು ಮರಿಮಗಳನ್ನು ಅಗಲಿದ್ದಾರೆ.

ಸಂತಾಪ: ವಾಂಗರಿ ನಿಧನದ ಬಗ್ಗೆ ವಿಶ್ವಸಂಸ್ಥೆಯ ಪರಿಸರ ವಿಭಾಗ (ಯುಎನ್‌ಇಪಿ) ತನ್ನ ಶೋಕ ವ್ಯಕ್ತ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.