ADVERTISEMENT

ನ್ಯೂಯಾರ್ಕ್‌: ಬಾಂಗ್ಲಾ ಇಮಾಮ್‌ ಹತ್ಯೆ

ಅಮೆರಿಕದಲ್ಲಿ ಮುಸ್ಲಿಂ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿರುವ ಆತಂಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2016, 19:45 IST
Last Updated 14 ಆಗಸ್ಟ್ 2016, 19:45 IST
ಬಾಂಗ್ಲಾದೇಶ ಮೂಲದ  ಇಮಾಮ್ ಮೌಲಾಮಾ ಅಕೊಂಜಿ  ಅವರನ್ನು  ಬಂದೂಕುಧಾರಿಯೊಬ್ಬ  ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಖಂಡಿಸಿ ನ್ಯೂಯಾರ್ಕ್‌ ಮುಸ್ಲಿಂ ನಾಗರಿಕ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು    ರಾಯಿಟರ್ಸ್ ಚಿತ್ರ
ಬಾಂಗ್ಲಾದೇಶ ಮೂಲದ ಇಮಾಮ್ ಮೌಲಾಮಾ ಅಕೊಂಜಿ ಅವರನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಖಂಡಿಸಿ ನ್ಯೂಯಾರ್ಕ್‌ ಮುಸ್ಲಿಂ ನಾಗರಿಕ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು ರಾಯಿಟರ್ಸ್ ಚಿತ್ರ   

ನ್ಯೂಯಾರ್ಕ್‌ (ಪಿಟಿಐ): ಬಾಂಗ್ಲಾದೇಶ ಮೂಲದ ಅಮೆರಿಕದ ಇಮಾಮ್ ಮೌಲಾಮಾ ಅಕೊಂಜಿ ಮತ್ತು ಅವರ ಸಹಾಯಕನನ್ನು ಇಲ್ಲಿನ ಮಸೀದಿಯೊಂದರ ಸಮೀಪ ಬಂದೂಕುಧಾರಿಯೊಬ್ಬ ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದು,  ದೇಶದಲ್ಲಿ ಮುಸ್ಲಿಂ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿರುವ ಆತಂಕ ಮತ್ತಷ್ಟು ತೀವ್ರಗೊಂಡಿದೆ.

ಇಮಾಮ್‌ ಮೌಲಾಮಾ ಅಕೊಂಜಿ ಮತ್ತು ಅವರ ಸಹಾಯಕ ಥಾರಾ ಉದ್ದಿನ್‌ ಅವರು ಅಲ್‌ ಫುರ್ಖಾನ್‌ ಜೇಮ್‌ ಮಸೀದಿಯಲ್ಲಿ ಶನಿವಾರ ಮಧ್ಯಾಹ್ನ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ  ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.

ಪ್ರತ್ಯಕ್ಷದರ್ಶಿಗಳು ಮತ್ತು ವಿಡಿಯೊ ದೃಶ್ಯಾವಳಿಗಳ ಪ್ರಕಾರ ಗಾಢವರ್ಣದ ಪೋಲೊ ಅಂಗಿ ಮತ್ತು ಶಾರ್ಟ್ಸ್‌ ಧರಿಸಿದ್ದ ವ್ಯಕ್ತಿ ಕೈಯಲ್ಲಿ ಬಂದೂಕು ಹಿಡಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಒಬ್ಬನೇ ವ್ಯಕ್ತಿ ಈ ಕೃತ್ಯ ಎಸಗಿದ್ದು, ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಗುಂಡಿನಿಂದ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅಕೊಂಜಿ ಮತ್ತು ಉದ್ದಿನ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

‘ದಾಳಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಅವರ ಧಾರ್ಮಿಕ ನಂಬಿಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬುದಕ್ಕೆ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸುಳಿವು ದೊರೆತಿಲ್ಲ’ ಎಂದು ಪೊಲೀಸ್ ಅಧಿಕಾರಿ ಹೆನ್ರಿ ಸೌಟ್ನರ್ ತಿಳಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು, ಮುಸ್ಲಿಮರು ಅಮೆರಿಕ ಪ್ರವೇಶಿಸದಂತೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಹೇಳಿಕೆ ನೀಡಿದ ಬಳಿಕ ದೇಶದಾದ್ಯಂತ ನಡೆಯುತ್ತಿರುವ ಮುಸ್ಲಿಂ ವಿರೋಧಿ ಘಟನೆಗಳ ಕುರಿತು ವರದಿ ನೀಡಿರುವುದಾಗಿ  ನ್ಯೂಯಾರ್ಕ್‌ ಮುಸ್ಲಿಂ ನಾಗರಿಕ ಒಕ್ಕೂಟ ಮತ್ತು ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್‌ ಸಮಿತಿ ತಿಳಿಸಿವೆ.

‘ಈ ಅಮಾನವೀಯ ಹತ್ಯೆಗಳನ್ನು ನಡೆಸಿದ ಕೊಲೆಗಡುಕರನ್ನು ಶೀಘ್ರವೇ ಬಂಧಿಸಬೇಕು ಮತ್ತು ಅವರಿಗೆ ಕಾನೂನಿನ ಅನ್ವಯ ಕಠಿಣ ಶಿಕ್ಷೆಯಾಗಬೇಕು’ ಎಂದು ಈ ಸಂಘಟನೆಗಳು ಒತ್ತಾಯಿಸಿವೆ. ಹತ್ಯೆ ನಡೆದ ಕೆಲವೇ ಗಂಟೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿ ಸಮೀಪ ಸೇರಿ ಘಟನೆಯನ್ನು ಖಂಡಿಸಿದರು.

‘ಅಮೆರಿಕ ಹೀಗೆ ಇರಲಿಲ್ಲ. ಇದಕ್ಕೆ ನಾವು  ಡೊನಾಲ್ಡ್ ಟ್ರಂಪ್ ಅವರನ್ನು ದೂಷಿಸುತ್ತೇವೆ. ಟ್ರಂಪ್ ಮತ್ತು ಅವರ ನಾಟಕಗಳು ಮುಸ್ಲಿಮರಲ್ಲಿ ಭಯ ಹುಟ್ಟಿಸಿವೆ’ ಎಂದು ಸ್ಥಳೀಯ ನಿವಾಸಿ ಖೈರುಲ್‌ ಇಸ್ಲಾಂ ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾದೇಶದ ಪ್ರಮುಖ ಧಾರ್ಮಿಕ ಮುಖಂಡರಾದ ಇಮಾಮ್ ಅಕೊಂಜಿ ಎರಡು ವರ್ಷದಿಂದ ಕ್ವೀನ್ಸ್‌ನಲ್ಲಿ ನೆಲೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.