ADVERTISEMENT

ನ್ಯೂಯಾರ್ಕ್ ಟೈಮ್ಸಗೆ ಪುಲಿಟ್ಜರ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ವಾಷಿಂಗ್ಟನ್ (ಐಎಎನ್‌ಎಸ್): `ದ ಫಿಲಡೆಲ್ಫಿಯ ಇನ್‌ಕ್ವೈರರ್~ ದಿನಪತ್ರಿಕೆಯು ಪ್ರತಿಷ್ಠಿತ ಪುಲಿಟ್ಜರ್ ಸಾರ್ವಜನಿಕ ಸೇವಾ ವಿಭಾಗದ 96ನೇ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದೆ.

ನ್ಯೂಯಾರ್ಕ್‌ನಲ್ಲಿರುವ ಕೊಲಂಬಿಯಾ ವಿ.ವಿ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಲಾಯಿತು.
ಫಿಲಡೆಲ್ಫಿಯಾ ನಗರದ ಶಾಲೆಗಳಲ್ಲಿ ಮಕ್ಕಳು ತಮ್ಮ ಸಹಪಾಠಿಗಳ ವಿರುದ್ಧವೇ ಎಸಗುತ್ತಿರುವ ಕ್ರೌರ್ಯದ ಪ್ರಕರಣಗಳನ್ನು ಪತ್ರಿಕೆ ಎಳೆಎಳೆಯಾಗಿ ಬಹಿರಂಗಗೊಳಿಸಿತ್ತು. ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಹೆಚ್ಚಿಸುವ ಸುಧಾರಣೆಗಳು ಜಾರಿಯಾಗಲು ಕೂಡ ಈ ವರದಿ ಪೂರಕವಾಗಿತ್ತು.

ತನಿಖಾ ವರದಿಗಾಗಿ ಅಸೋಸಿಯೇಟೆಡ್ ಪ್ರೆಸ್, ಸಿಯಾಟಲ್ ಟೈಮ್ಸ, ಅತ್ಯುತ್ತಮ ಸ್ಫೋಟಕ ಸುದ್ದಿಗಾಗಿ ಅಲಬಾಮಾದ ಟಸ್ಕಲೂಸ, ವಿವರಣಾತ್ಮಕ ಹಾಗೂ ಅಂತರರಾಷ್ಟ್ರೀಯ ವರದಿಗಾಗಿ ನ್ಯೂಯಾರ್ಕ್ ಟೈಮ್ಸ, ಅತ್ಯುತ್ತಮ ಸ್ಥಳೀಯ ವರದಿಗಾಗಿ ಪೆನ್ಸಿಲ್ವೇನಿಯಾದ ಪೇಟ್ರಿಯಟ್- ನ್ಯೂಸ್ ಪುಲಿಟ್ಜರ್ ಪ್ರಶಸ್ತಿಗಳಿಗೆ ಆಯ್ಕೆಯಾಗಿವೆ.

ಇರಾಕ್ ಮತ್ತು ಆಫ್ಘಾನಿಸ್ತಾನದ ಯುದ್ಧಗಳಲ್ಲಿ ಅಮೆರಿಕದ ಯೋಧರು ಎದುರಿಸುತ್ತಿರುವ ದೈಹಿಕ ಹಾಗೂ ಮಾನಸಿಕ ಸವಾಲುಗಳ ಕುರಿತ ವರದಿಗಾಗಿ ಹಫಿಂಗ್‌ಟನ್ ಪೋಸ್ಟ್ ಆನ್‌ಲೈನ್‌ಗೆ ಅತ್ಯುತ್ತಮ ರಾಷ್ಟ್ರೀಯ ವರದಿ ಪುರಸ್ಕಾರ ಸಂದಿದೆ. ಅತ್ಯುತ್ತಮ ನುಡಿಚಿತ್ರಕ್ಕಾಗಿನ ಪುರಸ್ಕಾರವು ಸಿಯಾಟಲ್‌ನಿಂದ ಹೊರಬರುವ ವಾರಪತ್ರಿಕೆ `ದಿ ಸ್ಟ್ರೇಂಜರ್~ ಪಾಲಾಗಿದೆ.

ಅತ್ಯುತ್ತಮ ಸ್ಫೋಟಕ ಸುದ್ದಿಯ ಛಾಯಾಚಿತ್ರಕ್ಕೆ ನೀಡುವ ಪ್ರಶಸ್ತಿಯು ಎಎಫ್‌ಪಿಯ ಮಸೌದ್ ಹೊಸ್ಸೈನಿ ಅವರಿಗೆ ಸಂದಿದೆ. ನ್ಯೂಯಾರ್ಕ್‌ನ ಕೊಲಂಬಿಯಾ ವಿ.ವಿ ಈ ಪ್ರಶಸ್ತಿ ನೀಡುತ್ತಿದ್ದು, ಪುರಸ್ಕೃತರಿಗೆ ತಲಾ 10,000 ಡಾಲರ್ ನಗದು, ಪ್ರಮಾಣಪತ್ರ ನೀಡಲಾಗುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.