ADVERTISEMENT

ಪತನ ಸಾಧ್ಯತೆ– ಚೀನಾ, ಅಲ್ಲಗಳೆದ ಮಲೇಷ್ಯಾ

ಮುಂದುವರಿದ ವಿಮಾನ ಶೋಧ : 4 ತಾಸು ಹಾರಾಟ– ಅಮೆರಿಕ ಶಂಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಕ್ವಾಲಾಲಂಪುರ/ಬೀಜಿಂಗ್‌ (ಪಿಟಿಐ/ಐಎಎನ್‌ಎಸ್‌/ಎಎಫ್‌ಪಿ): ನಿಗೂಢ­ವಾಗಿ ಕಣ್ಮರೆಯಾಗಿರುವ ವಿಮಾನ ಪತನವಾಗಿರುವ ಸಾಧ್ಯತೆಯ ಉಪಗ್ರಹ ಆಧಾರಿತ ದೃಶ್ಯಗಳನ್ನು ಚೀನಾ ಗುರುವಾರ ಬಿತ್ತ­ರಿ­ಸಿದೆ. ಹೊಸದೊಂದು ಸುಳಿವು ನೀಡಿರುವ ಅಮೆರಿಕ, ರೆಡಾರ್‌ ಸಂಪರ್ಕ ಕಡಿತದ ನಂತರವೂ ವಿಮಾನ ನಾಲ್ಕು ತಾಸುಗಳ ಹಾರಾಟ ನಡೆಸಿದೆ ಎಂದು ಶಂಕಿಸಿದೆ. ಇವೆರಡನ್ನೂ ಮಲೇಷ್ಯಾ ಅಲ್ಲಗಳೆದಿದೆ.

ಈ ಮಧ್ಯೆ, ಹಲವು ರಾಷ್ಟ್ರಗಳ ಸಹಯೋಗದಲ್ಲಿ ನಡೆಯುತ್ತಿರುವ ವಿಮಾನ ಶೋಧ ಕಾರ್ಯವು ಆರನೇ ದಿನವಾದ ಗುರುವಾರ ಕೂಡ ಬಿರುಸಿನಿಂದ ಮುಂದುವರಿಯಿತು. ಭಾರತದ ನಾಲ್ಕು ಯುದ್ಧ ನೌಕೆಗಳು ಮತ್ತು ಆರು ವಿಮಾನಗಳು ಕಾರ್ಯಾಚರಣೆಗೆ ಇಳಿದಿದ್ದವು.
ವಿಮಾನ  ಪತನವಾಗಿರುವ ಸಾಧ್ಯತೆ  ಮತ್ತು ರೆಡಾರ್‌ ಸಂಪರ್ಕ ಕಡಿತಗೊಂಡ ಮೇಲೂ ವಿಮಾನ ಕೆಲವು ತಾಸು ಹಾರಾಟ ನಡೆಸಿದೆ ಎಂಬುದನ್ನು ಒಪ್ಪಲಾಗದು ಎಂದು ಮಲೇಷ್ಯಾ ಹೇಳಿದೆ.

ಚೀನಾ ಬಿತ್ತರಿಸಿರುವ ದೃಶ್ಯಗಳನ್ನು ಅನುಸರಿಸಿ ಸಮುದ್ರ ಮಧ್ಯದ ಸ್ಥಳಕ್ಕೆ ಶೋಧನಾ ತಂಡಗಳು ತೆರಳಿದ್ದವು. ಆದರೆ ಅಲ್ಲಿ ಯಾವುದೇ ಭಗ್ನಾವಶೇಷಗಳು ಪತ್ತೆಯಾಗಿಲ್ಲ ಎಂದು ಮಲೇಷ್ಯಾ ಸ್ಪಷ್ಟಪಡಿಸಿದೆ. ವಿಯೆಟ್ನಾಂ ಕೂಡ ಇದನ್ನೇ ಹೇಳಿದೆ.

ರಾಷ್ಟ್ರದ ಭದ್ರತೆಗಿಂತಲೂ ಹೆಚ್ಚಿನ ಆದ್ಯತೆ: ಕ್ವಾಲಾಲಂಪುರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಹಿಶಮುದ್ದೀನ್‌ ಅಹ್ಮದ್‌, ‘ಚೀನಾ ಪ್ರಮಾದವಶಾತ್‌ ಕೆಲವು ದೃಶ್ಯಗಳನ್ನು ಬಿತ್ತರಿಸಿದೆ. ವಿಮಾನದ ಭಗ್ನಾವಶೇಷಗಳು ಪತ್ತೆಯಾಗು­ವವರೆಗೂ ನಾವು ತನಿಖೆಯಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಲಾಗದು’ ಎಂದಷ್ಟೆ ಹೇಳಿದರು.

‘ವಿಮಾನ ಪತ್ತೆಗೆ ಸರ್ಕಾರ ಸಕಲ ವಿವಿಧದಲ್ಲೂ ಪ್ರಯತ್ನಿಸುತ್ತಿದೆ. ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನೂ ಹಂಚಿಕೊಂಡಿದೆ. ರಾಷ್ಟ್ರದ ಭದ್ರತೆಗೆ ನೀಡುವ ಆದ್ಯತೆಗಿಂತಲೂ ಹೆಚ್ಚು ಗಮನವನ್ನು ಈ ಶೋಧ ಕಾರ್ಯಕ್ಕೆ ನೀಡಲಾಗಿದೆ. ನಾವು ಹತಾಶರಾಗಿಲ್ಲ ಎಂದರು.

‘ವಿಮಾನ ನಾಪತ್ತೆಯಾದ ಮೇಲೆ ಅದು ರೆಡಾರ್‌ ಸಂಪ­ರ್ಕಕ್ಕೆ ಬಂದಿಲ್ಲ ಎನ್ನುವುದನ್ನು ಈ ವಿಮಾನವನ್ನು ನಿರ್ಮಿಸಿರುವ ರೋಲ್ಸ್‌ ರಾಯ್ಸ್‌ ಮತ್ತು ಬೋಯಿಂಗ್‌ ಕಂಪೆನಿಗಳು ದೃಢ ಪಡಿಸಿವೆ. ಈ ಕಂಪೆನಿಗಳು ಕೂಡ ಶೋಧ ಕಾರ್ಯಕ್ಕೆ ನೆರವು ನೀಡುತ್ತಿವೆ’ ಎಂದರು.
ವಿಮಾನ ಸಂಖ್ಯೆ ಕೈಬಿಟ್ಟ ವಿಮಾನಯಾನ ಸಂಸ್ಥೆ: ನಿಗೂಢವಾಗಿ ನಾಪತ್ತೆ­ಯಾಗಿರುವ  ಬೋಯಿಂಗ್‌ 777 ವಿಮಾನದ  ‘ಎಂಎಚ್‌­370’ (ಕ್ವಾಲಾಲಂಪುರ– ಬೀಜಿಂಗ್‌) ಮತ್ತು ‘ಎಂಎಚ್‌ 371’ (ಬೀಜಿಂಗ್‌– ಕ್ವಾಲಾಲಂಪುರ) ಸಂಖ್ಯೆಯನ್ನು ಇನ್ನು ಮುಂದೆ ಬಳಸದಿರಲು ಮಲೇಷ್ಯಾ ವಿಮಾನಯಾನ ಸಂಸ್ಥೆ ನಿರ್ಧರಿಸಿದೆ.

ತೇಲುತ್ತಿದ್ದ ಸಂದೇಹಾಸ್ಪದ ವಸ್ತು– (ಬೀಜಿಂಗ್‌ ವರದಿ): ಮಲೇಷ್ಯಾ ಮತ್ತು ವಿಯೆಟ್ನಾಂ ಸಮುದ್ರದ ಮಧ್ಯೆ ಕೆಲವು ವಸ್ತುಗಳು ತೇಲುತ್ತಿರುವ ದೃಶ್ಯಗಳನ್ನು ತನ್ನ ದೇಶದ ಉಪಗ್ರಹವೊಂದು ಪತ್ತೆ ಮಾಡಿದೆ.   ಇವು ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಅವಶೇಷ­­ಗಳು ಇರಬಹುದೆಂದು ಶಂಕಿಸಲಾಗಿದೆ ಎಂದು ಈ ದೃಶ್ಯಗ­ಳನ್ನು ಬಿತ್ತರಿಸಿರುವ ಚೀನಾದ ರಾಷ್ಟ್ರೀಯ  ವಿಜ್ಞಾನ,  ತಂತ್ರಜ್ಞಾನ ಮತ್ತು ಕೈಗಾರಿಕಾ ರಕ್ಷಣಾ ಸಂಸ್ಥೆ (ಎಸ್‌ಎಎಸ್‌ಟಿಐಎನ್‌ಡಿ) ಹೇಳಿದೆ.

ಎಚ್ಚರಿಕೆ ನೀಡಿದ್ದ ಅಮೆರಿಕ: ಬೋಯಿಂಗ್‌ 777 ವಿಮಾನ ಶ್ರೇಣಿಯಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಅಮೆರಿಕದ ಕೇಂದ್ರೀಯ ವಿಮಾನಯಾನ ಆಡಳಿತವು (ಎಫ್‌ಎಎ) ಮಲೇಷ್ಯಾ ವಿಮಾನವು ಕಣ್ಮರೆಯಾಗುವುದುಕ್ಕೂ ಎರಡು ದಿನ ಮೊದಲು ಎಚ್ಚರಿಕೆ ನೀಡಿತ್ತು.
ಬೋಯಿಂಗ್‌ 777200, 200ಎಲ್‌ಆರ್‌, 300, 300ಇಆರ್‌ ಮತ್ತು 777ಎಫ್‌ ಶ್ರೇಣಿಯ ವಿಮಾನಗಳು ಹಾರಾಟಕ್ಕೆ ಯೋಗ್ಯ­ಮಾನದಂಡಗಳನ್ನು ಹೊಂದಿಲ್ಲ ಎಂದು ಎಫ್‌ಎಎ ತಿಳಿಸಿತ್ತು. ಆದರೆ, ನಾಪತ್ತೆಯಾಗಿರುವ ವಿಮಾನ ‘ಎಂಎಚ್‌370’ 7772­00 ಇಆರ್‌ ಶ್ರೇಣಿಯಾದ್ದು. ಈ ಶ್ರೇಣಿಯ ಬಗ್ಗೆ ಎಎಫ್‌ಎಫ್‌ ಏನೂ ಹೇಳಿಲ್ಲ.

₨ 75 ಕೋಟಿ ವಿಮೆಗೆ ಕೋರಿಕೆ: ವಿಮಾ ಕಂಪೆನಿ ಅಂದಾಜು: (ಮುಂಬೈ ವರದಿ): ವಿಮಾನ ನಾಪತ್ತೆಯಾಗಿರುವುದರಿಂದ ಸುಮಾರು ₨ 75 ಕೋಟಿಗಳಷ್ಟು ಮೊತ್ತದ ವಿಮೆ ಮರುಪಾವತಿಗೆ ಕೋರಿಕೆ ಬರಬಹುದು ಎಂದು ‘ಜನರಲ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ’ (ಜಿಐಸಿ) ಅಂದಾಜಿಸಿದೆ. ಮಲೇಷ್ಯಾ ತನ್ನ ವಿಮಾನಕ್ಕೆ ಸುಮಾರು 40 ಕೋಟಿ ಡಾಲರ್‌ಗಳಿಗೆ (ಅಂದಾಜು  ₨ 2480 ಕೋಟಿ) ವಿಮೆ ಮಾಡಿಸಿರಬಹುದು ಎಂಬ ವರದಿ ಇದೆ. ಒಟ್ಟು ಮೊತ್ತದಲ್ಲಿ ಜಿಐಸಿಗೆ ಶೇ 3ರಷ್ಟು ಮೊತ್ತಕ್ಕೆ ಕೋರಿಕೆ ಬರಬಹುದು ಎನ್ನಲಾಗಿದೆ.

ಶೋಧ ಕಾರ್ಯಕ್ಕೆ ಭಾರತ ನೌಕಾ ತಂಡ: (ನವದೆಹಲಿ ವರದಿ): ನೌಕಾಪಡೆಯ ನಾಲ್ಕು ಯುದ್ಧ ನೌಕೆಗಳು, ಜಲಾಂತರ್ಗಾಮಿಯನ್ನು ಹೊಡೆದುರುಳಿಸುವ ಸಾಮರ್ಥ್ಯದ ಅತ್ಯಾಧುನಿಕ ಪಿ81 ವಿಮಾನ, ಕರಾವಳಿ ರಕ್ಷಣಾ ದಳದ ಎರಡು ಡಾರ್ನಿಯರ್‌ ವಿಮಾನಗಳು ಮತ್ತು ವಾಯುಪಡೆಯ ಎರಡು ಅತ್ಯಾಧುನಿಕ ವಿಮಾನಗಳು ಸೇರಿ ಆರು ವಿಮಾನಗಳು ಹಾಗೂ ಮೂರು ಹೆಲಿಕಾಪ್ಟರ್‌ಗಳು ಗುರುವಾರ ಶೋಧ ಕಾರ್ಯ ನಡೆಸಿವೆ.

ಶನಿವಾರದೊಳಗೆ ಪತ್ತೆ: ವಾಸ್ತುಶಾಸ್ತ್ರಜ್ಞರು!
(ಕ್ವಾಲಾಲಂಪುರ ವರದಿ): ನಿಗೂಢವಾಗಿ ಕಣ್ಮರೆಯಾಗಿರುವ ವಿಮಾನವು ಶನಿವಾರದೊಳಗೆ (ಮಾ.15) ಪತ್ತೆಯಾಗಲಿದೆ ಎಂದು ಚೆನ್ನೈ ಮೂಲದ ಜ್ಯೋತಿಷಿ, ವಾಸ್ತು ಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ.

ಯುವರಾಜ್‌ ಸೌಮ ಅವರು ಗ್ರಹಗಳ ಚಲನವಲನಗಳನ್ನು ಆಧರಿಸಿ ಈ ಭವಿಷ್ಯ  ವನ್ನು ‘ಮಲೇಷಿಯನ್‌ ಸ್ಟಾರ್’ ದೈನಿಕಕ್ಕೆ ತಿಳಿಸಿದ್ದಾರೆ. ‘ವಿಮಾನವು ಶನಿವಾರ ಅಶುಭ ಘಳಿಗೆಯಲ್ಲಿ ಕಣ್ಮರೆಯಾ­ಗಿದೆ. ಅಂದು ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ಶುಕ್ಲ ಪಕ್ಷದ ಅಷ್ಟಮಿಯ ದಿನವಾಗಿದ್ದು, ಚಂದ್ರ ಗ್ರಹ ಅಶುಭ ಸ್ಥಾನದಲ್ಲಿದ್ದ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.