ಕ್ವಾಲಾಲಂಪುರ(ಪಿಟಿಐ): ಮಲೇಷಿಯಾ ಮತ್ತು ವಿಯೆಟ್ನಾಂ ದೇಶಗಳ ನಡುವಿನ ಸಮುದ್ರದಲ್ಲಿ ಪತನವಾಗಿದೆ ಎನ್ನಲಾದ ಬೊಯಿಂಗ್ 777 ಪ್ರಯಾಣಿಕರ ವಿಮಾನದ ಪತ್ತೆಗಾಗಿ ತೀವ್ರಶೋಧ ಮುಂದುವರೆದಿದೆ.
ವಿಮಾನ ನಾಪತ್ತೆಯಾಗಿ 24 ಗಂಟೆಗಳು ಕಳೆದಿದ್ದು ಇನ್ನು ಕೂಡ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ಮಧ್ಯೆ ಶನಿವಾರ ಕ್ವಾಲಾಲಂಪುರದಿಂದ ಬಿಜೀಂಗ್ ಗೆ ಹೊರಟಿದ್ದ ವಿಮಾನವು ಪುನಃ ಕ್ವಾಲಾಲಂಪುರ ಕಡೆಗೆ ಮಾರ್ಗ ಬದಲಿಸಿರುವ ಸಾಧ್ಯತೆಯಿದೆ ಎಂದು ಇಲ್ಲಿನ ನಾಗರೀಕ ವಿಮಾನಯಾನ ಇಲಾಖೆ ತಿಳಿಸಿದೆ.
ಶನಿವಾರ ಮುಂಜಾನೆ 2.40ಕ್ಕೆ ಈ ನತದೃಷ್ಟ ವಿಮಾನವು ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. 12 ಸಿಬ್ಬಂದಿ ಸೇರಿ ಒಟ್ಟು 14 ದೇಶಗಳ 239 ಜನರು ಪ್ರಯಾಣಿಸುತ್ತಿದ್ದರು.
ಪಾಸ್ ಪೋರ್ಟ್ ಕದ್ದು ಪ್ರಯಾಣ: ನಾಪತ್ತೆಯಾಗಿರುವ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ನಕಲಿ ಪಾಸ್ ಪೋರ್ಟ್ ಬಳಸಿ ಪ್ರಯಾಣ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ವಿಮಾನಯಾನ ಇಲಾಖೆ ಅಧಿಕಾರಿಗಳು ಶನಿವಾರ ಪ್ರಕಟಿಸಿದ್ದ ವಿವರಗಳಲ್ಲಿ ಈ ಪತ್ತೆಯಾಗಿದೆ.
ಇಟಲಿ ಪ್ರಜೆ ಲ್ಯೂಗಿ ಮರಲ್ಡಿ ಎಂಬುವವರು ಕಳೆದ ವರ್ಷ ಆಗಸ್ಟ್ ನಲ್ಲಿ ಕಳೆದುಕೊಂಡಿದ್ದ ಪಾಸ್ ಪೋರ್ಟ್ ಅನ್ನು ಬಳಸಿ ವ್ಯಕ್ತಿಯೋರ್ವ ಪ್ರಯಾಣಿಸಿದ್ದಾನೆ. ಇದೇ ರೀತಿಯಲ್ಲಿ ಆಸ್ಟ್ರೇಲಿಯಾ ಪ್ರಜೆಯೊಬ್ಬರ ಪಾಸ್ ಪೋರ್ಟ್ ಅನ್ನು ಬಳಸಿ ಮತ್ತೋರ್ವ ವ್ಯಕ್ತಿ ಪ್ರಯಾಣ ಮಾಡಿದ್ದಾನೆ. ಮಾಧ್ಯಮಗಳಲ್ಲಿ ಪ್ರಯಾಣಿಕರ ವಿವರ ಪ್ರಕಟಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.