ADVERTISEMENT

ಪದವಿ ನಂತರ ಉದ್ಯೋಗ ವೀಸಾ ರದ್ದು- ಚಿಂತನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST

ಲಂಡನ್ (ಪಿಟಿಐ): ಭಾರತೀಯ ಮತ್ತು ಯುರೋಪಿಯನ್ ಒಕ್ಕೂಟದ ಹೊರತಾದ ದೇಶಗಳ ವಿದ್ಯಾರ್ಥಿಗಳು ತಮ್ಮ ಪದವಿ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಹುಡುಕಿಕೊಳ್ಳುವ ಸಲುವಾಗಿ ಇರುವ ಎರಡು ವರ್ಷಗಳ ವೀಸಾ ನೀಡುವುದನ್ನು ರದ್ದು ಪಡಿಸುವ ಬ್ರಿಟನ್ ಸರ್ಕಾರದ  ನಿರ್ಧಾರದಿಂದಾಗಿ  ಎಂಬಿಎ ಪದವಿಗಾಗಿ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಲಿದೆ ಎಂದು ಕೈಗಾರಿಕಾ ಮಂಡಳಿಯೊಂದು ತಿಳಿಸಿದೆ.

ಇಂಗ್ಲೆಂಡ್ ಸೇರಿದಂತೆ 70 ವಿವಿಧ ದೇಶಗಳಲ್ಲಿ ಎಂಬಿಎ ಪದವಿಗೆ ಮಾನ್ಯತೆ ನೀಡುವ ಲಂಡನ್ ಮೂಲದ ಎಂಬಿಎ ಪದವೀಧರರ ಸಂಘದ ಪ್ರಕಾರ, ಬ್ರಿಟನ್ ಸರ್ಕಾರದ ಈ ನಿಲುವು ತೀರಾ ಕಳವಳಕಾರಿ. ಇದು ಭಾರತೀಯರೂ ಸೇರಿದಂತೆ ವಿದೇಶಿ ಪದವೀಧರರು ಇಲ್ಲಿ ಉದ್ಯೋಗ ಪಡೆಯುವುದನ್ನು ನಿರ್ಬಂಧಿಸುತ್ತದೆ ಎಂದಿದೆ.

ಬ್ರಿಟನ್‌ನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಯುರೋಪಿನ್ ಒಕ್ಕೂಟಕ್ಕೆ ಹೊರತಾದ ದೇಶಗಳ ಪದವೀಧರರು ಇಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಕಳೆದ ವಾರ ವಲಸೆ ಸಚಿವ ಡೇಮಿಯನ್ ಗ್ರೀನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.