ADVERTISEMENT

ಪರಿಚಾರಿಕೆಗೆ ರೂ 32 ಕೋಟಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಪ್ಯಾರಿಸ್ (ಐಎಎನ್‌ಎಸ್/ಆರ್‌ಐಎ ನೊವೊಸ್ತಿ): ಹೋಟೆಲ್ ಪರಿಚಾರಿಕೆಯೊಂದಿಗಿನ ಲೈಂಗಿಕ ಹಗರಣದಲ್ಲಿ ಸಿಲುಕಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥನ ಸ್ಥಾನ ತ್ಯಜ್ಯಿಸಿದ್ದ ಡಾಮ್ನಿಕ್ ಸ್ಟ್ರಾಸ್ ಕಾನ್, ನ್ಯಾಯಾಲಯದ ಹೊರಗೆ ಪರಸ್ಪರ ರಾಜಿ ಸಂಧಾನದ ಮೂಲಕ ಪ್ರಕರಣಇತ್ಯರ್ಥಗೊಳಿಸಲು ಮುಂದಾಗಿದ್ದಾರೆ.

ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ನ್ಯೂಯಾರ್ಕ್‌ನ ಹೋಟೆಲ್‌ವೊಂದರ ಪರಿಚಾರಿಕೆ ನಫಿಸ್ಸಿತೌ ಡೈಯಾಲೊಗೆ ಕಾನ್ 60 ಲಕ್ಷ ಡಾಲರ್ ಹಣವನ್ನು (ರೂ 32 ಕೋಟಿ) ಪರಿಹಾರ ರೂಪವಾಗಿ ನೀಡುವ ಒಪ್ಪಂದ ಕುದುರಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸ್ಟ್ರಾಸ್ ಮತ್ತು ಡೈಯಾಲೊ ವಕೀಲರು ನಿರಾಕರಿಸಿದ್ದಾರೆ. ಒಪ್ಪಂದವನ್ನು ದೃಢಪಡಿಸುವ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. 

ನ್ಯೂಯಾರ್ಕ್‌ನ ಸಿವಿಲ್ ನ್ಯಾಯಾಲಯದಲ್ಲಿ ಕಾನ್ ವಿರುದ್ಧ ಡೈಯಾಲೊ `ಲೈಂಗಿಕ ದೌರ್ಜನ್ಯ'ದ ದಾವೆ ಹೂಡಿದ್ದರು. ತಾನು ನಿರಪರಾಧಿ ಎಂದು ವಾದಿಸಿದ್ದ ಕಾನ್, `ಒಂದು ವೇಳೆ ತಾನು ಹೋಟೆಲ್ ಪರಿಚಾರಿಕೆಯೊಂದಿಗೆ ಯಾವುದೇ ರೀತಿಯ ಲೈಂಗಿಕ ಸಂಪರ್ಕ ಹೊಂದಿದ್ದರೆ ಅದಕ್ಕೆ ಅವಳ ಸಂಪೂರ್ಣ ಸಮ್ಮತಿ ಇತ್ತು' ಎಂದು ವಾದಿಸಿದ್ದರು. ಹತ್ತು ಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು.

ADVERTISEMENT

ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ಬರ ಪರ ವಕೀಲರು ಪದೇ ಪದೇ ಹೇಳುತ್ತಿದ್ದರು.`ಲೈಂಗಿಕ ದೌರ್ಜನ್ಯ ನಡೆಸಿದ ಕಾನ್ ಅವರನ್ನು ಡೈಯಾಲೊ ನ್ಯಾಯಾಲಯದಲ್ಲಿಯೇ ಎದುರಿಸುವರು' ಎಂದು ಅವರ ವಕೀಲರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.