ADVERTISEMENT

ಪಶ್ಚಿಮ ರಾಷ್ಟ್ರಗಳ ವಿರುದ್ಧ ಇರಾನ್ ಕೆಂಡ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST
ಪಶ್ಚಿಮ ರಾಷ್ಟ್ರಗಳ ವಿರುದ್ಧ ಇರಾನ್ ಕೆಂಡ
ಪಶ್ಚಿಮ ರಾಷ್ಟ್ರಗಳ ವಿರುದ್ಧ ಇರಾನ್ ಕೆಂಡ   

ಇಸ್ಲಾಮಾಬಾದ್ (ಪಿಟಿಐ): ಪಶ್ಚಿಮ ರಾಷ್ಟ್ರಗಳ ಅನಗತ್ಯ ಹಸ್ತಕ್ಷೇಪ ನೀತಿಯಿಂದಾಗಿ ತಮ್ಮ ರಾಷ್ಟ್ರ ಮತ್ತು ನೆರೆಯ ರಾಷ್ಟ್ರಗಳಲ್ಲಿ ಸಮಸ್ಯೆ ಉಂಟಾಗಿದ್ದು, ಸಮಸ್ಯೆಯನ್ನು ಮೂರು ರಾಷ್ಟ್ರಗಳ ಶೃಂಗಸಭೆಯ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ ಎಂದು ಇರಾನ್ ಅಧ್ಯಕ್ಷ ಮಹ್ಮೂದ್ ಅಹಮದಿನೆಜಾದ್ ಸ್ಪಷ್ಟಪಡಿಸಿದ್ದಾರೆ.

ಆಫ್ಘಾನಿಸ್ತಾನದ ಅಧ್ಯಕ್ಷ ಹಮಿದ್ ಕರ್ಜೈ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಜತೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,  ಬಾಹ್ಯ ಒತ್ತಡದಿಂದಾಗಿ ಈ ವಲಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.

ನಮ್ಮ ವಲಯದೊಳಗಿನ ಎಲ್ಲಾ ಸಮಸ್ಯೆಗಳಿಗೂ ಹೊರಗಿನವರೇ ಕಾರಣ. ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಮತ್ತು ನಮ್ಮ ಅಭಿವೃದ್ಧಿಗೆ ಅಡ್ಡಗಾಲು ಹಾಕಲು ಈ ಬಾಹ್ಯ ಶಕ್ತಿಗಳು  ಹುನ್ನಾರ ನಡೆಸಿವೆ ಎಂದು ಯಾವುದೇ ರಾಷ್ಟ್ರದ ಹೆಸರನ್ನು ಹೇಳದೆ ಪಶ್ಚಿಮ ರಾಷ್ಟ್ರಗಳ ಮೇಲೆ ಹರಿಹಾಯ್ದರು.

`ಈ ಬಾಹ್ಯ ಶಕ್ತಿಯನ್ನು ಎದುರಿಸಬೇಕಾದರೆ ನಾವು ಒಗ್ಗಟ್ಟಿನಿಂದ ಇರಬೇಕು. ಇರಾನ್, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿಕೊಂಡು ತ್ರಿಪಕ್ಷೀಯ ಶೃಂಗಸಭೆ ನಡೆಸುವ ಮೂಲಕ ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು~ ಎಂದು ಅಹಮದಿನೆಜಾದ್ ಬಲವಾಗಿ ಪ್ರತಿಪಾದಿಸಿದರು.

ಟೆಹರಾನ್‌ನ ಪರಮಾಣು ಕಾರ್ಯಕ್ರಮ ವಿರೋಧಿಸಿ ಪಶ್ಚಿಮ ರಾಷ್ಟ್ರಗಳು ಹೇರಿರುವ ದಿಗ್ಬಂಧನ ಮತ್ತು ಆಫ್ಘಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ಜತೆ ಅಮೆರಿಕ ಸಂಧಾನ ನಡೆಸುವ ಪ್ರಸ್ತಾವದ ಹಿನ್ನೆಲೆಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮೂರು ರಾಷ್ಟ್ರಗಳ ಅಧ್ಯಕ್ಷರು, `ತಮ್ಮ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ~ ಎಂದು ಸ್ಪಷ್ಟವಾಗಿ ಸಾರಿದರು.

ಇದೇ ಸಂದರ್ಭದಲ್ಲಿ ಮೂವರು ಅಧ್ಯಕ್ಷರೂ ಭಯೋತ್ಪಾದಕರ ನಿರ್ಮೂಲನೆಗೆ ಪಣ ತೊಟ್ಟರಲ್ಲದೆ, ಈ ವಿಚಾರದಲ್ಲಿ ಹಾಗೂ ಸೇನಾ ಬಲವರ್ಧನೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಸಹಕಾರ ಹೊಂದಲು ನಿರ್ಧರಿಸಿದರು.

ಟೆಹರಾನ್‌ನ ಪರಮಾಣು ಕಾರ್ಯಕ್ರಮ ವಿರೋಧಿಸಿ ಪಶ್ಚಿಮ ರಾಷ್ಟ್ರಗಳು ಹೇರಿರುವ ದಿಗ್ಬಂಧನ ಮತ್ತು ಆಘ್ಘಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ಜತೆ ಅಮೆರಿಕ ಸಂಧಾನ ನಡೆಸುವ ಪ್ರಸ್ತಾವದ ವಿಚಾರವು ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನವಾಗಿ ಚರ್ಚೆಯಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಆಫ್ಘಾನಿಸ್ತಾನ ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಯತ್ನಕ್ಕೆ ಇರಾನ್ ಮತ್ತು ಪಾಕಿಸ್ತಾನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ನೆಲೆ ಒದಗಿಸುವುದಿಲ್ಲ- ಪಾಕ್
ಒಂದು ವೇಳೆ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಲು ಮುಂದಾಗಿದ್ದೇ ಆದರೆ, ಆ ರಾಷ್ಟ್ರಕ್ಕೆ ತನ್ನ ನೆಲದಿಂದ ದಾಳಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಇರಾನ್ ಅಧ್ಯಕ್ಷ ಮಹಮದ್ ಅಹಮದಿನೆಜಾದ್ ಹಾಗೂ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಜತೆ ನಡೆದ ತ್ರಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೀಗೆ ಹೇಳಿದ್ದಾರೆ
`ನಮಗೆ ನಮ್ಮ ನಡುವಿನ (ಪಾಕಿಸ್ತಾನ-ಇರಾನ್) ಬಾಂಧವ್ಯ ಮುಖ್ಯವಾಗಿದ್ದು, ಯಾವುದೇ ವಿದೇಶಿ ಒತ್ತಡಗಳು ಅದಕ್ಕೆ ಅಡ್ಡಿಯಾಗುವುದಿಲ್ಲ~ ಎಂದು ಜರ್ದಾರಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.