ADVERTISEMENT

ಪಾಕಿಸ್ತಾನದಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಇಸ್ಲಾಮಾಬಾದ್ (ಐಎಎನ್‌ಎಸ್): ಒಸಾಮ ಬಿನ್ ಲಾಡೆನ್ ಹತ್ಯೆಯ ಕುರಿತು ಪಾಕಿಸ್ತಾನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಇದು ನಿಜವೆಂದು ನಂಬಲು ಸಾಧ್ಯವಿಲ್ಲ’, ‘ಇಂಥ ಘಟನೆಗಳು ಪಾಕಿಸ್ತಾನದಲ್ಲೇ ಏಕೆ ನಡೆಯುತ್ತವೆ?’ ಹೀಗೆ ಜನರು ಫೇಸ್‌ಬುಕ್‌ನಲ್ಲಿ ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 

ಲಾಡೆನ್ ಹತ್ಯೆಯನ್ನು ಪಾಕ್ ಜನತೆಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅದರಲ್ಲೂ ಇನ್ನೂ ಕೆಲವರಂತೂ ಪಾಕಿಸ್ತಾನದ ನೆಲದಲ್ಲಿ ಲಾಡೆನ್ ಹತ್ಯೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ.

ಲಾಡೆನ್ ಹತ್ಯೆಯ ಕಾರ್ಯಾಚರಣೆ ಕುರಿತು ಹಲವು ಪಾಕಿಸ್ತಾನೀಯರು ಪ್ರಶ್ನಿಸಿದ್ದು ಲಾಡೆನ್ ಹತ್ಯೆಯಾದ ಮಾತ್ರಕ್ಕೆ ಭಯೋತ್ಪಾದನೆಯ ಕೊನೆಯಾಗದು ಎಂದೂ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಇದು ನಿಜವಾದ ಸುದ್ದಿ ಎಂದು ನನಗನ್ನಿಸುತ್ತಿಲ್ಲ. ಅಮೆರಿಕದ ಅಧ್ಯಕ್ಷರ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು ಈ ಸುದ್ದಿ ಒಬಾಮಾ ಅವರಿಗೆ ಚುನಾವಣೆಯಲ್ಲಿ ಜಯಗಳಿಸಲು ನೆರವಾಗುತ್ತದೆ’ ಎಂದು ಇಸ್ಲಾಮಾಬಾದ್‌ನ ಬಹರಿಯಾ ವಿಶ್ವವಿದ್ಯಾಲಯದ ಫೈಸಲ್ ರಾಜಾ ಅವರು ಟಿವಿ ನಿರೂಪಕ ನದೀಮ್ ಮಲಿಕ್ ಅವರ ಫೇಸ್‌ಬುಕ್‌ನಲ್ಲಿನ ಪ್ರತಿಕ್ರಿಯೆಗೆ ಉತ್ತರಿಸಿದ್ದಾರೆ.

‘ಅಮೆರಿಕ ಅಧ್ಯಕ್ಷರೆ, ನಿಮಗೆ ಧನ್ಯವಾದಗಳು. ಆದರೆ ಲಾಡೆನ್ ಹತ್ಯೆಯನ್ನು ಯಾರು ನಡೆಸಿದರು? ಎಲ್ಲಿ ನಡೆಸಿದರು? ಮತ್ತು ನಮಗೆ ಲಾಡೆನ್ ಮೃತದೇಹವನ್ನು ತೋರಿಸಿ’  ಎಂದು ಪೆಶಾವರದ ರೆಹಾನ್ ಅವಾನ್ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ‘ಹತ್ಯೆ ನಡೆದದ್ದು ಪಾಕಿಸ್ತಾನದಲ್ಲಿ. ಆದರೆ ಹತ್ಯೆಯನ್ನು ಘೋಷಿಸಿದ್ದು ಮಾತ್ರ ಅಮೆರಿಕ ಅಧ್ಯಕ್ಷರು. ಇದೆಲ್ಲಿಯ ನ್ಯಾಯ’ ಎಂದು ನದೀಮ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.