ADVERTISEMENT

ಪಾಕಿಸ್ತಾನ ಸೇನೆ ಬೆಂಬಲಕ್ಕೆ ನಿವೃತ್ತ ಸೇನಾಧಿಕಾರಿಗಳ ಕೂಟ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಹಾಗೂ ಸೇನಾ ಪಡೆಯ ನಡುವೆ ಸಂಘರ್ಷ ಉದ್ಭವಿಸಿರುವ ಹಿನ್ನೆಲೆಯಲ್ಲಿ, ದೇಶದ 150ಕ್ಕೂ ಹೆಚ್ಚು ನಿವೃತ್ತ ಸೇನಾಧಿಕಾರಿಗಳು ಸೇನೆಯ ಬೆಂಬಲಕ್ಕೆ ನಿಂತಿದ್ದಾರೆ.

ಶನಿವಾರ ಇಲ್ಲಿ ಸಭೆ ಸೇರಿದ್ದ ನಿವೃತ್ತ ಸೇನಾಧಿಕಾರಿಗಳು `ಪಾಕಿಸ್ತಾನ ಫಸ್ಟ್   ಗ್ರೂಪ್~ (ಪಿಎಫ್‌ಜಿ) ಎಂಬ ರಾಜಕೀಯೇತರ ಕೂಟ ರಚಿಸಿಕೊಂಡಿದ್ದು, ಸೇನೆ ಮತ್ತು ಐಎಸ್‌ಐ ವಿರುದ್ಧ ನಡೆಯುತ್ತಿರುವ ಟೀಕಾ ಪ್ರಹಾರ ತಡೆಯುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ `ಪಿಎಫ್‌ಜಿ~ ಪ್ರಜಾಪ್ರಭುತ್ವ ಹಾಗೂ ದೇಶದ ಕಾನೂನನ್ನು ಸಹ ಗೌರವಿಸಲಿದೆ ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ಮಂಡಿಸಿದ ಗೊತ್ತುವಳಿಯಲ್ಲಿ, `ಸೇನೆ ಮತ್ತು ಐಎಸ್‌ಐ ವಿರುದ್ಧ ಸತತ ವಾಗ್ದಾಳಿ ಮಾಡುವುದು ಸರಿಯಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಈ ಸಂಸ್ಥೆಗಳು ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಇಂತಹ ಸಂಸ್ಥೆಗಳು ದುರ್ಬಲವಾದಲ್ಲಿ ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ~ ಎಂದು ಹೇಳಲಾಗಿದೆ.

ಈ ಹಿಂದೆ ಸೇನಾಪಡೆಯಲ್ಲಿ ಅತಿ ಮುಖ್ಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಸೇನಾಧಿಕಾರಿಗಳು `ಪಿಎಫ್‌ಜಿ~ ಸಭೆಯಲ್ಲಿ ಪಾಲ್ಗೊಂಡಿದ್ದರು. 1999ರಲ್ಲಿ ನವಾಜ್ ಷರೀಫ್ ಅವರ ವಿರುದ್ಧ ಜನರಲ್ ಪರ್ವೇಜ್ ಮುಷರಫ್ ಸೇನಾ ಕ್ರಾಂತಿ ನಡೆಸಿದಾಗ ಅವರ ಜತೆಗಿದ್ದ ಜನರಲ್ ಮೊಹಮ್ಮದ್ ಅಜೀಜ್ ಖಾನ್ ಸಹ ಭಾಗವಹಿಸಿದ್ದರು.
ಲಂಡನ್‌ನಲ್ಲಿರುವ ಮುಷರಫ್, ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.