ADVERTISEMENT

ಪಾಕ್‌ನಲ್ಲಿ ಪಾತಕಿ ಲಾಡೆನ್ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ಇಸ್ಲಾಮಾಬಾದ್/ವಾಷಿಂಗ್ಟನ್ (ಪಿಟಿಐ, ಐಎಎನ್‌ಎಸ್): ಜಗತ್ತು ಕಂಡ ಅತಿ ಕ್ರೂರ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಸೋಮವಾರ ಮುಂಜಾನೆ ಪಾಕ್ ನೆಲದಲ್ಲಿ ಅಮೆರಿಕ ಕಮಾಂಡೊಗಳ ಗುಂಡಿಗೆ ಬಲಿಯಾದ.

ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರ ಮತ್ತು ಪೆಂಟಗಾನ್ ಮೇಲೆ ಯೋಜಿತ ದಾಳಿ ನಡೆಸಿ ಮೂರು ಸಾವಿರ ಮಂದಿಯ ಸಾವಿಗೆ ಕಾರಣನಾಗಿದ್ದ ಅಲ್‌ಖೈದಾ ಸಂಘಟನೆಯ ಮುಖ್ಯಸ್ಥ ಲಾಡೆನ್‌ನನ್ನು ಒಂದು ದಶಕದ ಹುಡುಕಾಟದ ನಂತರ ಕೊನೆಗೂ ಕೊಂದು ಹಾಕುವಲ್ಲಿ ಅಮೆರಿಕ ಸರ್ಕಾರ ಯಶಸ್ಸು ಗಳಿಸಿದೆ.

ಇಸ್ಲಾಮಾಬಾದ್‌ನಿಂದ 120 ಕಿ.ಮೀ. ದೂರದಲ್ಲಿರುವ ಅಬೋಟಾಬಾದ್‌ನಲ್ಲಿ ಲಾಡೆನ್ ಅಡಗಿರುವ ಸಂಗತಿ ಅಮೆರಿಕ ಗುಪ್ತಚರ ಸಂಸ್ಥೆ ಸಿಐಎ ಅಧಿಕಾರಿಗಳಿಗೆ ಗೊತ್ತಾಗುತ್ತಿದ್ದಂತೆ ಅವರು ಅತ್ಯಂತ ರಹಸ್ಯ ಕಾರ್ಯಾಚರಣೆಯ ತಂತ್ರವನ್ನು ರೂಪಿಸಿದರು. ಈ ಕಾರ್ಯಾಚರಣೆಯು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಮಾರ್ಗದರ್ಶನದಲ್ಲಿಯೇ ನಡೆದಿದ್ದುದು ಒಂದು ವಿಶೇಷ. ಆದರೆ  ಈ ಕಾರ್ಯಾಚರಣೆಯ ಕೊನೆಯವರೆಗೂ ಪಾಕಿಸ್ತಾನ ಸರ್ಕಾರಕ್ಕೆ ಒಂದಿನಿತೂ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಲಾಗಿದ್ದುದು ಮತ್ತೊಂದು ವಿಶೇಷ.

ADVERTISEMENT

ಲಾಡೆನ್ ಎಲ್ಲಿಯೂ ದೂರವಾಣಿ ಮತ್ತು ಇಂಟರ್‌ನೆಟ್ ಬಳಸದಿರುವುದರಿಂದ ಆತ ಕೊರಿಯರ್ ಸೇವೆಯನ್ನು ಬಳಸುತ್ತಿರಬಹುದೆಂದು ಶಂಕಿಸಿದ ಸಿಐಎ, ಆ ವ್ಯವಸ್ಥೆಯ ಮೇಲೆ ಕಣ್ಣಿಟ್ಟು ಕೊನೆಗೂ ಅದರಲ್ಲಿ ಯಶಸ್ಸು ಗಳಿಸಿತು. ಎರಡು ವರ್ಷಗಳ ಹಿಂದೆಯೇ ಈ ಬಗ್ಗೆ ಖಚಿತ ಪಡಿಸಿಕೊಂಡಿದ್ದ ಸಿಐಎ ಕೊನೆಗೂ ಅಬೋಟಾಬಾದ್‌ನ ಒಂದು ಮನೆಯ ಮೇಲೆ ಕಣ್ಣಿಟ್ಟಿತು. 2005ರಲ್ಲಿ ನಿರ್ಮಿಸಲಾದ ಆ ಎರಡು ಅಂತಸ್ತಿನ ಮನೆಯ ಸುತ್ತಲೂ 12 ಅಡಿಗಿಂತಲೂ ಹೆಚ್ಚು ಎತ್ತರದ ಆವರಣ ಗೋಡೆಗಳನ್ನು ಕಟ್ಟಲಾಗಿತ್ತು. ಆ ಮನೆಯಲ್ಲಿ ದೂರವಾಣಿ, ಇಂಟರ್‌ನೆಟ್ ಬಳಸಲಾಗುತ್ತಿರಲಿಲ್ಲ. ಪಾಕ್ ಸೇನಾ ಅಕಾಡೆಮಿಯಿಂದ ಕೇವಲ ನೂರು ಮೀಟರ್‌ಗಳಷ್ಟು ದೂರದಲ್ಲಿದ್ದ ಆ ಮನೆಯ ಬಗ್ಗೆ ಯಾರೂ ಶಂಕಿಸುವಂತಿರಲಿಲ್ಲ. ಆದರೆ ಸಿಐಎನವರು ಅನುಮಾನ ಪಟ್ಟಿದ್ದಲ್ಲದೆ, ಆ ಮನೆಯಲ್ಲಿದ್ದವರ ಚಲನವಲನಗಳ ಮೇಲೆ ಉಪಗ್ರಹದ ಮೂಲಕ ಕಣ್ಣಿಡುವ ಕೆಲಸವೂ ನಡೆಯಿತು. ಕೊನೆಗೂ ಆ ಮನೆಯೊಳಗೆ ಲಾಡೆನ್ ಇರುವುದು ಖಚಿತ ಪಟ್ಟಿತ್ತು.

ಇಲ್ಲಿ ಕಾರ್ಯಾಚರಣೆ ನಡೆಸುವ ಕುರಿತು ಬರಾಕ್ ಒಬಾಮ ನೇತೃತ್ವದಲ್ಲಿಯೇ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹಾ ತಂಡ ಮಾರ್ಚ್ ತಿಂಗಳಲ್ಲಿಯೇ 5 ಸಭೆಗಳನ್ನು ನಡೆಸಿತು. ‘ಅಬೋಟಾಬಾದ್ ಕಾರ್ಯಾಚರಣೆ’ಗೆ ಏಪ್ರಿಲ್ 29ರಂದು ಒಬಾಮ ಅಂತಿಮ ಸಹಿ ಹಾಕಿದರು. ಮೇ ಒಂದರಂದು ಬೆಳಿಗ್ಗೆ ಅಮೆರಿಕ ಕಾಲಮಾನದ ಪ್ರಕಾರ ಬೆಳಿಗ್ಗೆ 8.20ಕ್ಕೆ ಶ್ವೇತಭವನದಲ್ಲಿ ಒಬಾಮ ಕಾರ್ಯಾಚರಣೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಧ್ಯಾಹ್ನ 2 ಗಂಟೆ ಮತ್ತು 3.50ಕ್ಕೆ ಕೂಡಾ ಸಭೆ ನಡೆಸಿದ್ದರು. ರಾತ್ರಿ ಏಳು ಗಂಟೆಗೆ ಶ್ವೇತಭವನದೊಳಗೆ ಎಲ್ಲರೂ ಉಸಿರು ಬಿಗಿ ಹಿಡಿದು ಕುಳಿತ್ತಿದ್ದರು. 8.30ಕ್ಕೆಲ್ಲಾ ಕಾರ್ಯಾಚರಣೆ ಯಶಸ್ವಿಯಾದ ಸುದ್ದಿ ಬಂದಿತು. ಮತ್ತೆ ಕೆಲವೇ ನಿಮಿಷದ ಸಭೆಯ ನಂತರ ಮಾಧ್ಯಮಗಳಿಗೆ ಕರೆ ಹೋಯಿತು. 11ಗಂಟೆಗೆಲ್ಲಾ ಪತ್ರಕರ್ತರನ್ನುದ್ದೇಶಿಸಿ ಅಧ್ಯಕ್ಷ ಒಬಾಮ ಅವರು “ಉಗ್ರ ಲಾಡೆನ್ ಸತ್ತಿದ್ದಾನೆ” ಎಂದು ಘೋಷಿಸಿದರು. ಸುದ್ದಿ ಗೊತ್ತಾಗುತ್ತಿದ್ದಂತೆಯೇ ಮಧ್ಯರಾತ್ರಿಯನ್ನೂ ಲೆಕ್ಕಿಸದೆ ನ್ಯೂಯಾರ್ಕ್, ವಾಷಿಂಗ್ಟನ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ ಸಹಸ್ರಾರು ಮಂದಿ ಬೀದಿಗಳಿದು ಸಂಭ್ರಮಿಸಿದರು.

ಕಾರ್ಯಾಚರಣೆ ನಡೆದ ಪರಿ: ಶುಕ್ರವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಥಾಮಸ್ ಡೊನಿಲೊನ್ ಮತ್ತು ಭಯೋತ್ಪಾದಕ ನಿಗ್ರಹ ಪಡೆಯ ಸಲಹೆಗಾರ ಜಾನ್ ಓ ಬ್ರೇನನ್ ಹಾಗೂ ಇತರ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕಾರ್ಯಾಚರಣೆಗೆ ಅಂತಿಮ ರೂಪ ನೀಡುವಂತೆ ಒಬಾಮ ತಿಳಿಸಿದರು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಲಾಡೆನ್‌ನ ಮನೆ ಬಳಿ ಮುಂಜಾನೆ ಅಮೆರಿಕ ಕಮಾಂಡೊ ಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು  ಏಕಾಏಕಿ ಬಂದಿಳಿದವು. ಅದರೊಳಗಿದ್ದ ನುರಿತ ಕಮಾಂಡೊಗಳು ಕಾಂಪೌಡ್ ದಾಟಿ ಒಳ ನುಗ್ಗಿದಾಗ ಲಾಡೆನ್‌ಗೆ ಬೆಂಗಾವಲಾಗಿದ್ದ ಅರಬ್ ಮೂಲದ ಅಂಗರಕ್ಷಕರು ಕಟ್ಟಡದ ಮೇಲಿನಿಂದ ಗುಂಡು ಹಾರಿಸಲು ಆರಂಭಿಸಿದರು. ಈ ಚಕಮಕಿ ನಂತರ ಅಮೆರಿಕ ಪಡೆಗಳು ಮೇಲುಗೈ ಸಾಧಿಸಿದವು.

ಹಲವು ಸುತ್ತು ಗುಂಡಿನ ದಾಳಿಯ ನಂತರ ಕಮಾಂಡೊ ಪಡೆ ಒಸಾಮ ತಲೆಗೆ ಗುಂಡಿಕ್ಕಿದೆ. ದಾಳಿಯಲ್ಲಿ ಲಾಡೆನ್ ಜತೆಗೆ ಒಬ್ಬ ಪುತ್ರ ಮತ್ತು ಇತರ ಮೂವರು ಅಂಗರಕ್ಷಕರು ಹತರಾಗಿದ್ದಾರೆ. ಲಾಡೆನ್ ಅಂಗರಕ್ಷಕರು ಶಸ್ತ್ರ ಸಜ್ಜಿತರಾಗಿದ್ದು, ಅವರಲ್ಲಿನ ಬಹುತೇಕ ಮಂದಿಯನ್ನು ದಾಳಿಯ ನಂತರ ಅಮೆರಿಕ ಪಡೆಯವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆದರೆ ಅಮೆರಿಕ ಪಡೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಅಧಿಕಾರಿಗಳು ತಿಳಿಸಿರುವುದಾಗಿ ‘ಎಬಿಸಿ’ ವಾಹಿನಿ ವರದಿ ಮಾಡಿದೆ. ಅಮೆರಿಕದ ಸಿಐಎ, ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮತ್ತು ಇತರ ಗುಪ್ತಚರ ಎಜೆನ್ಸಿಗಳ ಅತ್ಯುತ್ತಮ ಗುಪ್ತಚರ ಮಾಹಿತಿಯನ್ನು ಬಳಸಿಕೊಂಡು ಅತ್ಯಂತ ಜಾಗ್ರತೆಯಿಂದ ಈ ದಾಳಿ ನಡೆಸಿದೆ.

ಒಸಾಮ ಬಿನ್ ಲಾಡೆನ್ ಮುಸ್ಲಿಮರ ಮುಖಂಡನಲ್ಲ. ಆತ ನೂರಾರು ಮುಸ್ಲಿಮರನ್ನು ಕಗ್ಗೊಲೆಗೈದ ನರಹಂತಕ
- ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

ಲಾಡೆನ್ ಹತ್ಯೆಯಿಂದ ಜಗತ್ತಿನಲ್ಲಿ ಭಯೋತ್ಪಾದಕರ ಚಟುವಟಿಕೆಯ ಬೆನ್ನುಮೂಳೆ ಮುರಿದಂತಾಗಿದೆ.
- ಪಾಕಿಸ್ತಾನದ ವಿದೇಶಾಂಗ, ಖಾತೆಯ ಪ್ರಕಟಣೆ

ಲಾಡೆನ್ ಇಸ್ಲಾಮಾಬಾದ್‌ಗೆ ಸಮೀಪದಲ್ಲೇ ಇದ್ದುದು ವಿವಿಧ ಸಂಘಟನೆಗಳಿಗೆ ಸೇರಿದ ಉಗ್ರರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಭಾರತದ ಆತಂಕವನ್ನು ಪುಷ್ಟೀಕರಿಸಿದೆ.
 - ಪಿ.ಚಿದಂಬರಂ, ಕೇಂದ್ರ ಗೃಹ ಸಚಿವ

ಅಬೋಟಾಬಾದ್‌ನಲ್ಲಿ ಅಮೆರಿಕದ ಕಾರ್ಯಾಚರಣೆಯು ಪಾಕಿಸ್ತಾನದ ಸಾರ್ವಭೌಮತ್ವದ ಮೇಲೆ ನಡೆಸಿದ ದೌರ್ಜನ್ಯ.
- ಪರ್ವೇಜ್ ಮುಷರಫ್, ಪಾಕ್‌ನ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.