ADVERTISEMENT

ಪಾಕ್ ಅಧ್ಯಕ್ಷರ ಕಾರ್ಯದರ್ಶಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST

ಲಾಹೋರ್ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಪ್ರಧಾನ ಕಾರ್ಯದರ್ಶಿಗೆ ಲಾಹೋರ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಜರ್ದಾರಿ ರಾಷ್ಟ್ರದ ಅಧ್ಯಕ್ಷರಾಗಿದ್ದರೂ ಆಡಳಿತಾರೂಢ `ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ~ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕೋರ್ಟ್‌ನ ಆದೇಶದ ಹೊರತಾಗಿಯೂ ಅವರು ರಾಜಕೀಯ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂದು ಆಕ್ಷೇಪಿಸಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಈ ನೋಟಿಸ್ ನೀಡಲಾಗಿದೆ.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂದಿಯಾಲ್ ಈ ನೋಟಿಸನ್ನು ಶುಕ್ರವಾರವೇ ಜಾರಿ ಮಾಡಿದ್ದಾರೆ. ಕಾನೂನಿನ ಸೂಕ್ಷ್ಮ ವಿಷಯಗಳನ್ನು ವಿಶ್ಲೇಷಿಸಬೇಕಿರುವುದರಿಂದ ಈ ಪ್ರಕರಣವನ್ನು ವಿಸ್ತೃತ ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂದು ಅವರು ಕಲಾಪವನ್ನು ಇದೇ 27ಕ್ಕೆ ಮುಂದೂಡಿದ್ದಾರೆ.
ವಕೀಲ ಮುಹಮ್ಮದ್ ಅಜ್ಹರ್ ಸಿದ್ದಿಕಿ ಈ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶವನ್ನು ಅಧ್ಯಕ್ಷ ಜರ್ದಾರಿ ಅವರು ಪಾಲಿಸಿಲ್ಲ; ರಾಷ್ಟ್ರದ ಅಧ್ಯಕ್ಷರ ಹುದ್ದೆಯನ್ನು ಪಕ್ಷದ ಚಟುವಟಿಕೆಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಹಿಂದಿನ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು. ಹಾಗೆಯೇ ಜರ್ದಾರಿ ಅವರಿಗೂ ನೋಟಿಸ್ ಜಾರಿ ಮಾಡಬೇಕು ಎಂದು ಅರ್ಜಿದಾರರ ಪರ ವಕೀಲ ಎ.ಕೆ. ಡೋಗರ್ ಅವರ ವಾದವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.