ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಹೃದಯಭಾಗದಲ್ಲಿ ಇರುವ ನ್ಯಾಯಾಲಯ ಸಂಕೀರ್ಣಕ್ಕೆ ಸೋಮವಾರ ನುಗ್ಗಿದ ಅಪರಿಚಿತ ಬಂದೂಕುಧಾರಿಗಳು ಆತ್ಮಹತ್ಯಾ ದಾಳಿ ನಡೆಸಿದ್ದರಿಂದ ನ್ಯಾಯಾಧೀಶರೊಬ್ಬರು ಸೇರಿ ಹನ್ನೊಂದು ಜನ ಮೃತಪಟ್ಟಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ರಫಾಕತ್ ಅಹಮ್ಮದ್ ಖಾನ್ ಅವಾನ್ ಘಟನೆಯಲ್ಲಿ ಮೃತಪಟ್ಟಿದ್ದು, 10 ಮಂದಿ ವಕೀಲರು ಸಾವನ್ನಪ್ಪಿದ್ದಾರೆ. 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಐವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ನ್ಯಾಯಾಲಯ ಕಲಾಪ ನಡೆಯುತ್ತಿದ್ದಾಗ ನುಗ್ಗಿದ ಬಂದೂಕುಧಾರಿಗಳು ಮೊದಲು ಎರಡು ಗ್ರೆನೇಡ್ ಎಸೆದರು. ಆನಂತರ ಹದಿನೈದು ನಿಮಿಷಗಳ ಕಾಲ ಸತತವಾಗಿ ಗುಂಡಿನ ದಾಳಿ ನಡೆಸಿದರು.
ಒಟ್ಟು ಎಷ್ಟು ಮಂದಿ ಉಗ್ರರು ನ್ಯಾಯಾಲಯಕ್ಕೆ ನುಗ್ಗಿದ್ದರು ಎಂಬುದು ಖಚಿತವಾಗಿಲ್ಲ. ಆದರೆ, ಸ್ಥಳೀಯ ಪೊಲೀಸರು ಉಗ್ರರನ್ನು ಮಣಿಸಲು ಮುಂದಾದಾಗ ಇಬ್ಬರು ತಮ್ಮನ್ನು ತಾವೇ ಸ್ಫೋಟಿಸಿಕೊಂಡರು ಎಂದು ಇಸ್ಲಾಮಾಬಾದ್‌ನ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಇಸ್ಲಾಮಾಬಾದ್ ಸುರಕ್ಷಿತ ನಗರ ಎಂದು ಒಳಾಡಳಿತ ಸಚಿವ ಚೌಧರಿ ನಿಸರ್ ಅಲಿ ಖಾನ್ ಹೇಳಿದ ಕೆಲವೇ ದಿನಗಳಲ್ಲಿ ದಾಳಿ ನಡೆದಿದೆ.
ಪ್ರಧಾನಿ ನವಾಜ್ ಶರೀಫ್ ಹಾಗೂ ಒಳಾಡಳಿತ ಸಚಿವ ನಿಸರ್ ಘಟನೆಯನ್ನು ಖಂಡಿಸಿದ್ದಾರೆ. ಈ ಕೃತ್ಯದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.
ಎರಡು ದಿನಗಳ ಹಿಂದೆಯಷ್ಟೇ ಕದನ ವಿರಾಮ ಘೋಷಿಸಿರುವ ಪಾಕಿಸ್ತಾನ್ ತಾಲಿಬಾನ್‌ನ ವಕ್ತಾರ ಶಾಹಿದುಲ್ಲಾ ಶಾಹಿದ್ ತಮ್ಮ ಸಂಘಟನೆ ಈ ಕೃತ್ಯ ನಡೆಸಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.