ADVERTISEMENT

ಪಾಕ್ ಸರ್ಕಾರ- ನ್ಯಾಯಾಂಗ ಸಂಘರ್ಷ ಹೊಸ ಅಧ್ಯಾಯಕ್ಕೆ ನಾಂದಿ?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾಕ್ ಸುಪ್ರೀಂ ಕೋರ್ಟ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ವಿರುದ್ಧ ಸೋಮವಾರ ದೋಷಾರೋಪ ನಿಗದಿ ಮಾಡಿರುವುದರಿಂದ `ನ್ಯಾಯಾಂಗ ನಿಂದನೆ~ ಪ್ರಕರಣದ ಮತ್ತೊಂದು ಅಧ್ಯಾಯ ಆರಂಭವಾಗುವ ಸಾಧ್ಯತೆ ಇದೆ.

ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಪಾಕ್ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಸಂಘರ್ಷಕ್ಕೆ  ಈ ಪ್ರಕರಣ ಕಾರಣವಾಗಿದೆ.

ಅಕ್ರಮ ಸಂಪಾದನೆ ಕುರಿತಂತೆ ಪಾಕ್ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ವಿರುದ್ಧದ ಪ್ರಕರಣಗಳನ್ನು ಮರು ತನಿಖೆಗೆ ಒಪ್ಪಿಸುವಂತೆ ಸುಪ್ರೀಂಕೋರ್ಟ್ ನೀಡಿದ ಸೂಚನೆ ಪಾಲಿಸದ ಕಾರಣ ನ್ಯಾಯಾಂಗ ನಿಂದನೆ ಆರೋಪಕ್ಕೆ ಪ್ರಧಾನಿ ಗಿಲಾನಿ ಗುರಿಯಾಗಿದ್ದಾರೆ.

ಜರ್ದಾರಿ ತಮ್ಮ ಅಕ್ರಮ ಗಳಿಕೆಯನ್ನು ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಎರಡು ವರ್ಷಗಳ ಹಿಂದೆಯೇ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ ನ್ಯಾಯಾಲಯದ ಸೂಚನೆಯನ್ನು ಕಡೆಗಣಿಸಿತ್ತು.

ವಿಚಾರಣೆಗೆ ಸೋಮವಾರ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಈ ಸಮನ್ಸ್ ಅನ್ನು ಪ್ರಶ್ನಿಸಿದ್ದ ಗಿಲಾನಿ ಅರ್ಜಿಯನ್ನು ಕೋರ್ಟ್ ಕಳೆದ ವಾರ ವಜಾ ಮಾಡಿತ್ತು.

ತಮ್ಮ ನಿವಾಸದಿಂದ ಬಳಿ ಬಣ್ಣದ ಎಸ್‌ಯುವಿ (ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ಕಾರನ್ನು ಪ್ರಧಾನಿ ಗಿಲಾನಿ ಸ್ವತಃ ಚಾಲನೆ ಮಾಡಿಕೊಂಡು ಸುಪ್ರೀಂಕೋರ್ಟ್‌ಗೆ ಆಗಮಿಸಿದರು. ವಕೀಲರ ತಂಡವೇ ಅವರ ಜೊತೆ ಇತ್ತು. ಕಪ್ಪು ಬಣ್ಣದ ಸೂಟ್, ಬೂದು ವರ್ಣದ ಟೈ ಧರಿದ್ದ ಗಿಲಾನಿ, ಅಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದರು.

ಬೆಂಬಲ: ಪಿಪಿಪಿ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ಇದ್ದೇ ಇದೆ ಎಂದು ಮಿತ್ರ ಪಕ್ಷಗಳು ಸೋಮವಾರ ಹೇಳಿವೆ. ಪ್ರಧಾನಿ ಗಿಲಾನಿ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಮಿತ್ರ ಪಕ್ಷಗಳು ಈ ನಿಲುವು ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.